‘ಗಿರಿಗಿಟ್’ ಚಿತ್ರ ಪ್ರದರ್ಶನಕ್ಕೆ ಕೋರ್ಟ್ ತಡೆ

ನ್ಯಾಯಾಂಗ, ವಕೀಲ ವೃತ್ತಿಗೆ ಅಗೌರವ- ದೂರು 

ಮಂಗಳೂರು, ಸೆ.೧೨- ಇತ್ತೀಚೆಗೆ ಬಿಡುಗಡೆಗೊಂಡು ಭಾರೀ ಜನಮೆಚ್ಚಿಗೆ ಪಡೆದಿರುವ ತುಳು ಹಾಸ್ಯಚಿತ್ರ ‘ಗಿರಿಗಿಟ್’ನಲ್ಲಿ ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲ ವೃತ್ತಿಯ ಕುರಿತು ಅಗೌರವ ತೋರಿದ್ದಾರೆ ಎಂದು ಆರೋಪಿಸಿರುವ ವಕೀಲರ ಸಂಘ ಈ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.
ಗಿರಿಗಿಟ್ ಚಿತ್ರದ ಲಾಯರ್ ಕೋದಂಡ ಪಾತ್ರದ ಮೂಲಕ ವಕೀಲರನ್ನು ತೀರಾ ತುಚ್ಛವಾಗಿ ಕಂಡಿರುವುದಲ್ಲದೆ ಹಾಸ್ಯಕ್ಕಾಗಿ ವೃತ್ತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.
ಚಿತ್ರದ ಕೋದಂಡ ಪಾತ್ರದಲ್ಲಿ ನಟಿಸಿರುವ ಖ್ಯಾತ ಕಲಾವಿದ ಅರವಿಂದ ಬೋಳಾರ್ ಅವರು ಹಾಸ್ಯ ಸನ್ನಿವೇಶದಲ್ಲಿ ಜನರ ಮನಗೆದ್ದಿದ್ದಾರೆ. ಅವರ ಪ್ರತೀ ಡೈಲಾಗ್‌ಗೂ ಪ್ರೇಕ್ಷಕರು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಈ ಮಧ್ಯೆ ಚಿತ್ರದ ಇಂಥ ಹಾಸ್ಯ ದೃಶ್ಯಗಳಿಂದ ನ್ಯಾಯಾಂಗ ಮತ್ತು ವಕೀಲರ ಗೌರವಕ್ಕೆ ಧಕ್ಜೆಯಾಗಿದೆ ಎಂದು ಮಂಗಳೂರು ಬಾರ್ ಎಸೋಸಿಯೇಷನ್ ಆರೋಪಿಸಿದೆ. ಚಲನಚಿತ್ರದ ವಿರುದ್ದ ಕೇಸು ದಾಖಲು ಮಾಡಲಾಗಿದೆ ಎಂದು ಕಾರ್ಯದರ್ಶಿ ರಾಘವೇಂದ್ರ ಎಚ್ ವಿ.ಹೇಳಿದ್ದಾರೆ. ಗಿರಿಗಿಟ್ ಚಿತ್ರದಲ್ಲಿ ಖ್ಯಾತ ಹಾಸ್ಯನಟರಾದ ಭೋಜರಾಜ್ ವಾಮಂಜೂರು, ನವೀನ್ ಡಿ. ಪಡೀಲ್, ಪ್ರಸನ್ನ ಬೈಲೂರು, ಸಂದೀಪ್ ಶೆಟ್ಟಿ, ಉಮೇಶ್ ಮಿಜಾರ್ ಜೊತೆಯಾಗಿ ನಟಿಸಿದ್ದರೆ ರೂಪೇಶ್ ಶೆಟ್ಟಿ ನಟಿಸಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Leave a Comment