ಗಾಳಿ-ಮಳೆ ಅವಾಂತರ

ವಿದ್ಯುತ್ ವ್ಯತ್ಯಯ, ಧರೆಗುರುಳಿದ ಮರಗಳು

ಮಂಗಳೂರು, ಮೇ ೧೯- ನಿನ್ನೆ ತಡರಾತ್ರಿಯಿಂದ ನಸುಕಿನ ಜಾವದವರೆಗೆ ನಗರದ ವಿವಿಧೆಡೆ ಸಿಡಿಲಿನಬ್ಬರದೊಂದಿಗೆ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿಸಿದೆ. ನಗರದ ಕಮಿಷನರ್ ಕಚೇರಿ ಪಕ್ಕ ಭಾರೀ ಗಾತ್ರದ ಮರ ರಸ್ತೆಗುರುಳಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದರೆ ಬಿಜೈ ಮ್ಯೂಸಿಯಂ ಪಕ್ಕವೂ ಮರವೊಂದು ರಸ್ತೆಗುರುಳಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು. ಅಲ್ಲಲ್ಲಿ ವಿದ್ಯುತ್ ಕಂಬ ಧರಾಶಾಹಿಯಾಗಿದ್ದು ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ನಗರದ ಬಿಜೈ ಮ್ಯೂಸಿಯಂ ಬಳಿಯಲ್ಲಿ ನಸುಕಿನ ಮೂರು ಗಂಟೆಯ ಸುಮಾರಿಗೆ ಸುರಿದ ಧಾರಾಕಾರ ಗಾಳಿ-ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದಿದ್ದು ಹತ್ತಿರದ ಫ್ಲ್ಯಾಟ್ ಒಂದರ ಟ್ರಾನ್ಸ್‌ಫಾರ್ಮರ್ ಶೆಡ್ ಮೇಲೆ ಬಿದ್ದು ಹಾನಿಯಾಗಿದ್ದು ಮೂರು ವಿದ್ಯುತ್ ಕಂಬಗಳು ರಸ್ತೆಗುರುಳಿವೆ. ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯ ಲ್ಯಾನ್ಸ್‌ಲಾಟ್ ಪಿಂಟೋರವರು ಸ್ಥಳದಲ್ಲಿದ್ದು ತೆರವುಗೊಳಿಸುತ್ತಿದ್ದಾರೆ.

ಗುರುವಾರ ತಡರಾತ್ರಿ ಆರಂಭವಾದ ಗಾಳಿ-ಮಳೆ ಕೆಲವು ಗಂಟೆಗಳ ಕಾಲ ಮುಂದುವರಿದಿತ್ತು. ವಿದ್ಯುತ್ ನಿಲುಗಡೆ ಮಾಡಿದ್ದರಿಂದಾಗಿ ನಗರವಾಸಿಗಳು ಸಮಸ್ಯೆ ಎದುರಿಸಿದರು. ಭಾರೀ ಗುಡುಗು ಸಿಡಿಲಿನಿಂದಾಗಿ ಗ್ರಾಮಾಂತರ ಪ್ರದೇಶ ಕಟೀಲು-ಕಿನ್ನಿಗೋಳಿ-ಪಕ್ಷಿಕೆರೆ ಬಳಿಯಲ್ಲೂ ಹತ್ತಾರು ಮರಗಳು ಧರೆಗುರುಳಿವೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಕಾರಣ ಮೆಸ್ಕಾಂ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಕೂಳೂರು ಫ್ಲೈ ಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಕೆಲವು ಅಡಿಗಳಷ್ಟು ನೀರು ನಿಂತಿದ್ದು ರಿಕ್ಷಾ, ದ್ವಿಚಕ್ರ ವಾಹನಗಳ ಸವಾರರು ಸಂಚಾರಕ್ಕೆ ಕಷ್ಟಪಡುವಂತಾಯಿತು.

Leave a Comment