ಗಾಯಾಳುವಿನ ಚಿಕಿತ್ಸೆಗೆ ವಿಳಂಬ ಮಾಡಿದ ವೆನ್‌ಲಾಕ್ ಆಸ್ಪತ್ರೆ : ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ ಮೇಲೆಯೇ ಕೇಸ್

ಮಂಗಳೂರು, ಜೂ.೧೮- ನಿನ್ನೆ ಪಶ್ಚಿಮ ಬಂಗಾಲದಲ್ಲಿ ನಡೆದಿದ್ದ ವೈದ್ಯರ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಖಂಡಿಸಿ ದೇಶವ್ಯಾಪಿ ವೈದ್ಯರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯ ಓಪಿಡಿ ಬಂದ್ ಆಗಿದ್ದು ಈ ವೇಳೆ ವೆನ್‌ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಅಪಘಾತದ ಗಾಯಾಳುವಿಗೆ ಚಿಕಿತ್ಸೆ ನೀಡಲು ವೈದ್ಯರು ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಕಾಯಿಸಿರುವ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋವನ್ನು ಗಾಯಾಳು ಯುವಕನ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜಿಲ್ಲಾಸ್ಪತ್ರೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ವೈದ್ಯರು ನೀಡಿದ ದೂರಿನನ್ವಯ ಪಾಂಡೇಶ್ವರ ಠಾಣೆಯಲ್ಲಿ ವಿಡಿಯೋ ಮಾಡಿದವರ ಮೇಲೆಯೇ ಪ್ರಕರಣ ದಾಖಲಾಗಿದೆ.
ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಯುವಕನನ್ನು ತುರ್ತು ಚಿಕಿತ್ಸೆಗಾಗಿ ಬೆಳಗ್ಗೆ ವೆನ್‌ಲಾಕ್ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಯುವಕನ ಸ್ನೇಹಿತರು ವೈದ್ಯರಲ್ಲಿ ತಕ್ಷಣ ಚಿಕಿತ್ಸೆ ಕೊಡಿಸುವಂತೆ ಕೇಳಿದ್ದರು. ಯುವಕನನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿದ ಸಿಬ್ಬಂದಿ ಒಂದೂವರೆ ಗಂಟೆಗೂ ಹೆಚ್ಚು ಸಮಯ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲೇ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯಿದ್ದರೂ ಈ ಬಗ್ಗೆ ತುರ್ತಾಗಿ ಗಮನಿಸಿಲ್ಲ ಎಂದು ಗಾಯಾಳುವಿನ ಸ್ನೇಹಿತರು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವೀಡಿಯೋ ಮಾಡಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಕೆಲವೇ ಹೊತ್ತಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಸರಕಾರಿ ಆಸ್ಪತ್ರೆಯ ನರಕದರ್ಶನ ಬಟಾಬಯಲಾಗಿತ್ತು. ಈ ಮಧ್ಯೆ ಅಪಘಾತದಲ್ಲಿ ಗಾಯಗೊಂಡ ಯುವಕನ ಸ್ನೇಹಿತರು ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರಿಗೆ ಅವ್ಯಾಚ ಶಬ್ದಗಳಿಂದ ಬೈದು ನಿಂದಿಸಿ ಆಸ್ಪತ್ರೆ ನಿಯಮಗಳು ಮೀರಿದ್ದಾರೆ ಎಂದು ಆರೋಪಿಸಿ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಮಂಗಳೂರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರು ಪಾಂಡೇಶ್ವರ ಠಾಣಾ ಪೋಲಿಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment