ಗಾಮನಗುಡ್ಡಕ್ಕೆ ಡ್ಯಾಂ ನಿರ್ಮಾಣ ಅಗತ್ಯ

ಸಿರಾ, ಡಿ. ೭- ಗಾಮನಗುಡ್ಡಕ್ಕೆ ಡ್ಯಾಂ ನಿರ್ಮಿಸುವುದು ಬಹಳ ಉಪಯುಕ್ತವಾಗಿದೆ. ಇಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಇದೆ. ರೈತರ ಹಿಡುವಳಿ ಭೂಮಿ ಮುಳುಗಡೆಯಾಗುವ ಪ್ರಮೇಯ ಇಲ್ಲ ಎಂದು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕೆ. ತಿಮ್ಮಯ್ಯ ಹೇಳಿದರು.

ಜಿಲ್ಲಾ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯು ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ನೇರಲಗುಡ್ಡ ಗ್ರಾ.ಪಂ.ವ್ಯಾಪ್ತಿಯಲ್ಲಿ ಡ್ಯಾಂ ನಿರ್ಮಿಸಲು ಉದ್ದೇಶಿಸಿರುವ ಮೂಲ ಸ್ಥಳದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಹಕ್ಕೋತ್ತಾಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೀರಾವರಿ ತಜ್ಞರ ಪ್ರಕಾರ ಕೇವಲ 10 ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಿ ಸುಮಾರು 2 ಟಿ.ಎಂ.ಸಿ. ನೀರು ಸಂಗ್ರಹಿಸಬಹುದಾಗಿದೆ. ನೀರಿನ ಸೋರ್ಸ್ ಕೂಡ ಯಥೇಚ್ಚವಾಗಿದೆ. ಗಾಮನಗುಡ್ಡ ಮತ್ತು ಕರೇಮಟ್ಟಿ ಮಧ್ಯದಲ್ಲಿ 500 ಮೀ.ಉದ್ದದ ಕಾಂಪೋಜಿಟ್ ಡ್ಯಾಂ ನಿರ್ಮಿಸಲು ತಾಂತ್ರಿಕವಾಗಿ ಸಾಧ್ಯವಾಗುತ್ತದೆ. ಇದರಿಂದ ಬುಕ್ಕಾಪಟ್ಟಣ ಹೋಬಳಿ, ಗೌಡಗೆರೆ ಹೋಬಳಿ, ಮತ್ತು ಕಸಬಾ ಹೋಬಳಿಯ ಹಲವಾರು ಗ್ರಾಮಗಳಿಗೆ ವ್ಯವಸಾಯಕ್ಕೆ ಮತ್ತು ಕುಡಿಯಲು ನೀರು ಕೊಡಬಹುದಾಗಿದೆ ಎಂದರು.

ನೇರಲಗುಡ್ಡ ಶಿವಕುಮಾರ್ ಮಾತನಾಡಿ, ಈ ಹಿಂದೆ ಮಾಜಿ ಶಾಸಕರಾಗಿದ್ದ ಸಿ.ಜೆ.ಮುಕ್ಕಣ್ಣಪನವರು 1960-65ನೇ ಸಾಲಿನಲ್ಲಿ ತಜ್ಞರಿಂದ ಸರ್ವೇ ಮಾಡಿಸಿ ಡ್ಯಾಂ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಎಂದರು.

ಸ್ಥಳೀಯ ಗ್ರಾ.ಪಂ.ಸದಸ್ಯ ಶಾಂತಯ್ಯ ಮತ್ತು ರಮೇಶ್ ಮಾತನಾಡಿ, ಇದೊಂದು ಉತ್ತಮವಾದ ಯೋಜನೆ ಬೋರನಕಣಿ ಡ್ಯಾಂ ರಾಮಲಿಂಗಾಪುರ ಕೆರೆ, ಚಿ.ನಾ.ಹಳ್ಳಿ ಗಂಟೇನಹಳ್ಳಿ ಕೆರೆ, ಬುಕ್ಕಾಪಟ್ಟಣದ ಹಿರೇಕೆರೆ ತುಂಬಿದಾಗ ಕೋಡಿಯ ನೀರು ಈ ಭಾಗದ ಮೂಲಕ ಹರಿಯುತ್ತದೆ. ಇದಕ್ಕೆ ನೀರಿನ ವಾಗ ಚೆನ್ನಾಗಿದೆ ಎಂಬುದಾಗಿ ತಿಳಿಸಿದರು. ಯಥೇಚ್ಚವಾಗಿ ಮಳೆಯಾದ ಅನೇಕ ಸಂದರ್ಭದಲ್ಲಿ ಈ ನೀರು ತುಂಗಭದ್ರಾ ನದಿ ಸೇರಿದ ಇತಿಹಾಸವಿದೆ ಎಂದರು.

ರಂಗಕರ್ಮಿ ಗೋಮಾರ್ಗನಹಳ್ಳಿ ಮಂಜುನಾಥ್ ಮಾತನಾಡಿ, 3 ಹೋಬಳಿ ಜನರನ್ನು ಸೇರಿಸಿ ಪ್ರಬಲವಾದ ಹೋರಾಟ ಮಾಡಬೇಕಾದ ಅಗತ್ಯವಿದೆ. ಇದೊಂದು ಅತ್ಯುತ್ತಮವಾದ ಯೋಜನೆ. ಯಾವ ನೀರನ್ನು ಹಸಿರನ್ನು ಕಾಣದ ಬರಪೀಡಿತ ಪ್ರದೇಶವಾದ ಗೌಡಗೆರೆ ಹೋಬಳಿಗೆ ನೀರಿನ ಅಗತ್ಯತೆ ಇದೆ. ನಾವು ಎಂತಹ ಹೋರಾಟಕ್ಕೂ ಸಿದ್ದರಿದ್ದೇವೆ ಎಂಬುದಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ, ಇನ್ನು ತಿಂಗಳೊಳಗಾಗಿ 3 ಹೋಬಳಿ ಜನರನ್ನು ಸಂಘಟಿಸಿ ನೇರಲಗುಡ್ಡದಿಂದ ಸಿರಾ ನಗರಕ್ಕೆ ಪಾದಯಾತ್ರೆ ಮೂಲಕ ಸಾಗಿ ಗಾಮನಗುಡ್ಡಕ್ಕೆ ಡ್ಯಾಂ ನಿರ್ಮಿಸುವಂತೆ ತಹಶೀಲ್ದಾರ್‍ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಕೊಡಲಾಗುವುದು. ಎಲ್ಲಾ ಜನಪರ ಸಂಘಟನೆಯ ಮುಖಂಡರು ತಾಲ್ಲೂಕು ರೈತ ಸಂಘ ಮತ್ತು ಈ ಭಾಗದ ಸಾರ್ವಜನಿಕರು ಗಾಮನಗುಡ್ಡಕ್ಕೆ ಡ್ಯಾಂ ನಿರ್ಮಿಸುವಂತೆ ಹಕ್ಕೋತ್ತಾಯ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ಬಿ.ಆರ್.ರಘುರಾವ್, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಧನಂಜಯಾರಾಧ್ಯ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿ.ಕೆ. ಲಕ್ಷ್ಮಣಗೌಡ, ಕಾರ್ಯದರ್ಶಿ ನಾದೂರು ಕೆಂಚಪ್ಪ, ಎಸ್.ಗೋವಿಂದಪ್ಪ, ಪರಮೇಶ್, ಸಿರಾ ಅಭಿವೃದ್ದಿ ವೇದಿಕೆ ಅಧ್ಯಕ್ಷ ವೈ.ಸಿ.ಶಾಂತರಾಜಯ್ಯ, ನೀರಾವರಿ ಹೋರಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಎಂ. ರಂಗನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment