ಗಾಣದಾಳ : ಪಿಡಿಓ ವರ್ಗಾವಣೆಗೆ ಒತ್ತಾಯ

ರಾಯಚೂರು.ಆ.22- ತಾಲೂಕಿನ ಗಾಣದಾಳ ಗ್ರಾಮ ಪಂಚಾಯತಿಗೆ ಬಿಡುಗಡೆಯಾಗಿರುವ ಅನುದಾನ ದುರ್ಬಳಿಕೆ ಪ‌ಡೆಸಿಕೊಂಡಿರುವ ಪಿಡಿಓ ಅವರನ್ನು ಶೀಘ್ರ ವರ್ಗಾಯಿಸದಿದ್ದಲ್ಲಿ ಜಿ.ಪಂ. ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆಂದು ಗ್ರಾಮ ಪಂಚಾಯತಿ ಸದಸ್ಯ ಪ್ರಾಣೇಶ ನಾಯಕ ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, 2015-18 ರವರೆಗೆ 14ನೇ ಹಣಕಾಸಿನ ಯೋಜನೆ ಕುರಿತು ಗ್ರಾ.ಪಂ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸದಸ್ಯರಿಗೆ ಮಾಹಿತಿ ನೀಡದೆ ತಮ್ಮ ಮನಬಂದಂತೆ ಅನುದಾನ ದುರ್ಬಳಕೆ ಪಡೆಸಿಕೊಂಡಿದ್ದಾರೆಂದು ಆರೋಪಿಸಿದರು. 2015 ರಿಂದ 2017 ರವರೆಗೆ ಪಂಚಾಯತಿಗೆ 900 ಮನೆ ಮಂಜೂರಿಯಾಗಿವೆ. ಪ್ರತಿ ಮನೆಗೆ ತಲಾ 1500 ರೂ.ಯಂತೆ ತೆರಿಗೆ ವಸೂಲಿ ಮಾಡಿರುವುದರಿಂದ ಸುಮಾರು 13.50 ಲಕ್ಷ ಜಮಾಯಿಸಲಾಗಿದೆ.
ಈ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಿಸಿದರೆ, ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗಾಣದಾಳ ಗ್ರಾಮ ಪಂಚಾಯತಿಗೆ ಮೂರು ಹಳ್ಳಿಗಳು ಒಳಪಡಲಿವೆ. ಬುಳ್ಳಾಪೂರ, ಚಿಕ್ಕಮಂಚಾಲಿ ಗ್ರಾಮಗಳಿವೆ. ಮೂರು ಗ್ರಾಮಗಳ ಜನರು ಕುಡಿವ ನೀರಿನ ನಳ ಸಂಪರ್ಕ ಪಡೆಯಲು 5 ಸಾವಿರ ರೂ. ಠೇವಣಿ ಮಾಡಲಾಗಿದ್ದರೂ ಇದುವರೆಗೂ ನಳದ ಸಂಪರ್ಕ ಕಲ್ಪಿಸದಿರುವುದರಿಂದ ಜನರು ಚುನಾಯಿತ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ದೂರಿದರು.
ಗ್ರಾ.ಪಂ. ಸಾಮಾನ್ಯ ಸಭೆ ಪ್ರತಿ ಮಾಸ ನಡೆಯುವುದು ವಾಡಿಕೆಯಾಗಿದೆ. ಆದರೆ, ಗಾಣದಾಳ ಗ್ರಾ.ಪಂ. ಅಧಿಕಾರಕ್ಕೆ ಬಂದ ನಂತರ ಆರು ಬಾರಿ ಮಾತ್ರ ಸಭೆ ನಡೆಸಿರುವುದರಿಂದ ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ವರ್ಷ 30 ಲಕ್ಷ ರೂ. ಅನುದಾನ ಬಿಡುಗಡೆಯಾಗುತ್ತದೆ. ಆದರೆ, ಸಮರ್ಪಕವಾಗಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡದಿರುವುದರಿಂದ ಅನುದಾನವೂ ತಮ್ಮ ಮನಬಂದಂತೆ ಬಳಕೆ ಮಾಡಲಾಗುತ್ತದೆ.
ಸರ್ಕಾರದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳಿಸುವ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸದಸ್ಯರೊಂದಿಗೆ ವಿಸ್ತೃತ ಚರ್ಚೆ ನಡೆಸುತ್ತಿಲ್ಲ. ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿ ಚರ್ಚಿಸಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಲಂ ಪಾಷಾ ಅವರನ್ನು ವರ್ಗಾಯಿಸಬೇಕೆಂದು ಒತ್ತಾಯಿಸಿದರು. ಗೋವಿಂದಮ್ಮ, ಚಂದ್ರಶೇಖರ, ಆಂಜಿನೇಯ್ಯ, ರಮೇಶ ಇತರರು ಉಪಸ್ಥಿತರಿದ್ದರು.

Leave a Comment