ಗಾಂಧೀಜಿಯದು ರಾಮರಾಜ್ಯವಲ್ಲ, ಗ್ರಾಮರಾಜ್ಯ: ನಾಗಪ್ಪ

ಗುಬ್ಬಿ, ಜು. ೧೧- ಮಹಾತ್ಮ ಗಾಂಧೀಜಿ ಅವರ ಚಿಂತನೆ ಗ್ರಾಮರಾಜ್ಯವಾಗಿತ್ತೇ ವಿನಃ ರಾಮರಾಜ್ಯವಾಗಿರಲಿಲ್ಲ ಎಂದು ಸಾಹಿತಿ ಎನ್. ನಾಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಎನ್. ರಾಂಪುರ ಗ್ರಾಮದಲ್ಲಿ ಜಿಲ್ಲಾ ಸರ್ವೋದಯ ಮಂಡಲ ಹಾಗೂ ಮಹಾತ್ಮಗಾಂಧಿ ಚಿಂತನಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಗ್ರಾಮಸಭೆ, ಗ್ರಾಮವಾಸ್ತವ್ಯ ಹಾಗೂ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾರತವೇ ನಿಜವಾದ ಭಾರತ ಎಂದು ನಂಬಿದ್ದ ಮಹಾತ್ಮರು ಹಳ್ಳಿಯ ಉದ್ದಾರವೇ ದೇಶದ ಉದ್ದಾರ ಎಂದು ಭಾವಿಸಿದ್ದರು. ಅಲ್ಲದೇ ಗ್ರಾಮೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಿದ್ದರು. ಗಾಂಧೀಜಿ ಅವರ ನೈತಿಕತೆ, ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆ, ಕಮ್ಯೂನಿಷ್ಟರ ಆರ್ಥಿಕ ನೀತಿಯನ್ನು ಅನುಸರಿಸಿದ್ದಲ್ಲಿ ಗ್ರಾಮಗಳು ಅಭಿವೃದ್ಧಿಯಾಗುತ್ತದೆ ಎಂದರು.
ನೈಸರ್ಗಿಕ ಕೃಷಿ ತಜ್ಞ ತಿಪ್ಪೇಸ್ವಾಮಿ ಮಾತನಾಡಿ, ರಾಸಾಯನಿಕ ಬಳಕೆಯಿಂದ ಭೂಮಿ ಶಾಶ್ವತವಾಗಿ ಸತ್ವಹೀನವಾಗುತ್ತಿದೆ. ಸಹಜ ಕೃಷಿಯಿಂದ ಮಾತ್ರ ಭೂಮಿಯ ಸತ್ವವನ್ನು ಉಳಿಸಲು ಸಾಧ್ಯ. ಗೋಮಾತೆ ವಿಶ್ವದ ತಾಯಿ ಎಂದ ಅವರು, ಒಬ್ಬ ರೈತ ಸತ್ತರೆ ವಿಶ್ವಕ್ಕೆ ನಷ್ಟ ಎಂದರು.

ಸಗಣಿ ಮತ್ತು ಗಂಜಲ ಜೀವಾಣುಗಳ ಸಾಗರ. ಬೇವಿನ ಕಷಾಯ, ಗೋಮೂತ್ರ, ನೀರು ಇವುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ 24 ದಿನಕ್ಕೊಂದರಂತೆ ಗಿಡಕ್ಕೆ ಸಿಂಪಡಿಸುತ್ತಾ ಹೋದರೆ ಯಾವ ರೋಗಗಳು ತಟ್ಟುವುದಿಲ್ಲ. ಒಂದು ನಾಟಿ ಹಸುವನ್ನು ಸಾಕಿದ್ದಲ್ಲಿ ಅದರ ಗಂಜಲ ಮತ್ತು ಸಗಣಿಯಿಂದ 30 ಎಕರೆ ಕೃಷಿ  ಭೂಮಿಯನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದರು.

ರಂಗಕರ್ಮಿ ಉಗಮ ಶ್ರೀನಿವಾಸ್ ಮಾತನಾಡಿ, ಬುದ್ದ 2500 ವರ್ಷಗಳ ಹಿಂದೆ ಇದ್ದರು, ಅದಾದ ಬಳಿಕ 12ನೇ ಶತಮಾನದಲ್ಲಿ ಬಸವಣ್ಣ, ಬಳಿಕ 19, 20 ನೇ ಶತಮಾನದಲ್ಲಿ ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ ಯಂತಹ ಮಹಾತ್ಮರು ಇದ್ದರು. ಒಬ್ಬ ಮಹಾತ್ಮರು ಹುಟ್ಟಲು ದೀರ್ಘ ಅವಧಿ ಬೇಕಾಯಿತು. ಬುದ್ದನ ಅಹಿಂಸೆ, ಬಸವಣ್ಣನ ಸಮ ಸಮಾಜದ ಕಲ್ಪನೆ ಗಾಂಧೀಜಿ ಅವರ ಸರಳತೆ ಹಾಗೂ ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಪುಲೆ ಅವರ ಹೋರಾಟ ಸರ್ವ ಕಾಲಕ್ಕೂ ಮಾದರಿಯಾದುದು ಎಂದರು.

ಎನ್. ರಾಂಪುರ ಗ್ರಾಮದ ಸುತ್ತಮುತ್ತ ಗೋಕಟ್ಟೆಗಳ ಪುನಶ್ಚೇತನ ಮಾಡಬೇಕು. ರಸ್ತೆ ಡಾಂಬರೀಕರಣ ಮಾಡಬೇಕು. ಕರ್ನಾಟಕ ಪಬ್ಲಿಕ್ ಶಾಲೆಯನ್ನು ನಿರ್ಮಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ, ಎಎನ್‍ಎಂ ವಸತಿ ಗೃಹ ಮತ್ತು ಪಿಂಚಣಿ ಅದಾಲತ್ ನಡೆಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೋದಯ ಮಂಡಲದ ಕಾರ್ಯದರ್ಶಿ ಆರ್.ವಿ. ಪುಟ್ಟಕಾಮಣ್ಣ, ಹೊದಲೂರು ಗಂಗಾಧರ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸರ್ವೋದಯ ಮಂಡಲದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Comment