ಗಾಂಜಾ ಸಾಗಾಟ: ಸೆರೆ

ಮಂಗಳೂರು, ಸೆ.೧೦- ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳದ ತಿರುವನಂತಪುರಂನ ವರ್ಕಳ ನಿವಾಸಿ ರಾಜೀವ ಎ.ಪಿ. (೪೮) ಹಾಗೂ ಬಂಟ್ವಾಳ ತಾಲೂಕಿನ ಉರಿಮಜಲು ನಿವಾಸಿ ಅಬ್ದುಲ್ ರಹೀಂ (೨೬) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಶಾಫಿ ಯಾನೆ ಕಲಂದರ ಶಾಫಿ ಎಂಬಾತನು ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಶನಿವಾರ ಕಾವೂರು ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ ಅವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಲಾಯಿತು. ಬಂಧಿತ ಆರೋಪಿಗಳಿಂದ ೭.೫೬ ಲಕ್ಷ ರೂ. ಮೌಲ್ಯದ ೪೨ ಕೆ.ಜಿ. ಗಾಂಜಾ, ೮೦ ಸಾವಿರ ಮೌಲ್ಯದ ಆಟೊ ರಿಕ್ಷಾ, ೪೦ ಸಾವಿರ ಮೌಲ್ಯದ ಬೈಕ್, ೨,೫೦೦ ರೂ. ಮೌಲ್ಯದ ಎರಡು ಮೊಬೈಲ್‌ಗಳು, ಗಾಂಜಾ ಕಟ್ಟುಗಳನ್ನು ತುಂಬಿಸಿದ್ದ ನಾಲ್ಕು ಲಗೇಜ್ ಬ್ಯಾಗ್‌ಗಳು ಸೇರಿದಂತೆ ಒಟ್ಟು ೮,೭೮,೫೦೦ ರೂ. ಮೌಲ್ಯದ ಸೊತ್ತುಗಳ ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾಪ್ರಶಾಂತ್, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ ಮತ್ತು ಸಿಬ್ಬಂದಿಗಳಾದ ಕಾವೂರು ಪೊಲೀಸ್ ಠಾಣೆಯ ಎಎಸ್ಸೈ ಹರೀಶ್ ಎಚ್.ವಿ., ಎಚ್.ಸಿ.ಗಳಾದ ರಾಜಶೇಖರ್ ಗೌಡ, ಪ್ರಮೋದ್ ಎ.ಎಸ್., ದುರ್ಗಾಪ್ರಸಾದ್ ಶೆಟ್ಟಿ, ವಿಶ್ವನಾಥ, ಪಿಸಿಗಳಾದ ವಿನಯ್ ಕುಮಾರ್ ಎಚ್.ಕೆ., ರಶೀದ್ ಶೇಖ್, ಸಿಖಂದರ್ ಚಿಂಚಲಿ, ಎ.ಎಚ್.ಸಿ ಇಬ್ರಾಹೀಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Comment