ಗಾಂಜಾ ಮಾರಾಟ: ಸೆರೆ

ಬೆಳ್ತಂಗಡಿ, ಸೆ.೨೨- ತನ್ನ ದ್ವಿಚಕ್ರ ವಾಹನದಲ್ಲಿ ಗಾಂಜಾ ಹೊಂದಿದ್ದ ಆರೋಪದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವ ಕೊಲೆ ಆರೋಪಿ ಯುವಕನೋರ್ವನನ್ನು ಧರ್ಮಸ್ಥಳ ಠಾಣಾ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.
ಮಂಗಳೂರು ಉಳಾಯಿಬೆಟ್ಟು ಗ್ರಾಮದ ನಿವಾಸಿ ಪ್ರದೀಪ್ ಪೂಜಾರಿ(೨೬) ಬಂಧಿತ ಆರೋಪಿ. ಸೆ.೨೦ರಂದು ೧:೩೦ರ ಸುಮಾರಿಗೆ ಈತ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೋತ್ರಿ ವಸತಿ ಗೃಹದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಿಚಾರಿಸಿದಾಗ ದ್ವಿಚಕ್ರ ವಾಹನದಲ್ಲಿ ೬೦ ಗ್ರಾಂ ಗಾಂಜಾ ಪತ್ತೆಯಾಗಿದೆ. ಇದನ್ನು ಸ್ವಬಳಕೆ ಹಾಗೂ ಮಾರಾಟದ ಉದ್ದೇಶದಿಂದ ಇಟ್ಟುಕೊಂಡಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರದೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗಾಂಜಾ ಪ್ರಕರಣದಲ್ಲಿ ಬಂಧಿತ ಆರೋಪಿ ಪ್ರದೀಪ್ ಪೂಜಾರಿ ಮಂಗಳೂರು ಸಬ್ ಜೈಲ್ನಲ್ಲಿ ನಡೆದ ಮಾಡೂರು ಇಸುಬು ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ. ಇದಲ್ಲದೆ ಈತನ ವಿರುದ್ಧ ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆಗೆ ಯತ್ನ ಮತ್ತು ಮುಲ್ಕಿ ಠಾಣೆಯಲ್ಲಿ ಡಕಾಯಿತಿಗೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣಗಳಲ್ಲಿ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment