ಗಾಂಜಾ ಮಾರಾಟ: ಆರೋಪಿ ಬಂಧನ

ಮಂಗಳೂರು, ನ.೨೦- ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪಣಂಬೂರು ಪೊಲೀಸರು ಒಬ್ಬನನ್ನು ಬಂಧಿಸಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ. ಮೀನಕಳಿಯ ಪಾಂಗಾಳ್ ಕಂಪೌಂಡ್ ನಿವಾಸಿ ಜಯರಾಮ್ ಯಾನೆ ವಿಕ್ರಮ್(೨೭) ಬಂಧಿತ ಆರೋಪಿ. ನವಾಝ್ ಯಾನೆ ಯೋಗಿ ನವಾಝ್ ಯಾನೆ ಮಡಿಕೇರಿ ನವಾಝ್ ಯಾನೆ ಅಜಿತ್(೨೬) ಪರಾರಿಯಾದ ಆರೋಪಿ.

ಪೊಲೀಸರು ರೌಂಡ್ಸ್‌ನಲ್ಲಿದ್ದಾಗ ಪಣಂಬೂರು ಕೂರಿಕಟ್ಟ ರೈಲ್ವೆ ಗೂಡ್ಸ್ ಸ್ಟೇಷನ್ ಬಳಿ ಸ್ಕೂಟರ್‌ನಲ್ಲಿ ಆಗಮಿಸಿದ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಪೊಲೀಸರು ದಾಳಿ ನಡೆಸಿ ಕೃತ್ಯಕ್ಕೆ ಬಳಸಿದ್ದ ಹೋಂಡಾ ಎಕ್ಷೆಸ್ ಸ್ಕೂಟರ್ ಮತ್ತು ಮಾರಾಟ ಮಾಡಲು ತಂದಿದ್ದ ೧ಕೆ.ಜಿ. ೧೮೦ಗ್ರಾಂ ಗಾಂಜಾ ಸಮೇತ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕ ಅಜ್ಮತ್ ಆಲಿ, ಪೊಲೀಸ್ ಉಪನಿರೀಕ್ಷಕ ಕುಮಾರೇಶನ್ ಮತ್ತು ಉತ್ತರ ಉಪವಿಭಾಗದ ರೌಡಿ ನಿಗ್ರಹದಳದ ಅಧಿಕಾರಿ, ಸಿಬ್ಬಂದಿ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಮತ್ತಿತರರು ಭಾಗವಹಿಸಿದ್ದರು.

Leave a Comment