ಗಾಂಜಾ ಅಡ್ಡೆಗೆ ಪೂರಕವಾಗಿದ್ದ ನೆಲ್ಲಿಕಟ್ಟೆ ಪರಿಸರದ ಪೊದೆ ತೆರವು

ಪುತ್ತೂರು, ಜು.೧೨- ಪುತ್ತೂರು ನಗರದ ಕೆಲವು ಭಾಗಗಳಲ್ಲಿ ಯುವಕರಿಗೆ ಗಾಂಜಾ ಸೇರಿದಂತೆ ಅಮಲು ಪದಾರ್ಥಗಳ ಸರಬರಾಜು ನಡೆಯುತ್ತಿದ್ದು, ಅಂತಹ ಪ್ರದೇಶಗಳಲ್ಲಿರುವ ಪೊದೆಗಳನ್ನು ನಿರ್ಣಾಮ ಮಾಡಲು ನಗರಸಭೆ ಮುಂದಾಗಿದೆ. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ನೆಲ್ಲಿಕಟ್ಟೆ ವಠಾರದಲ್ಲಿ ಪೊದೆಗಳ ಪರಿಸರದಲ್ಲಿ ಗಾಂಜಾ ಸೇವನೆಯ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳನ್ನು ಜನತೆಯಿಂದ ಮರೆಮಾಡುವ ಪೊದೆಗಳ ಕಾರಣದಿಂದಾಗಿ ಇಲ್ಲಿ ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ನಡೆಯುತ್ತಿದೆ ಎಂಬ ಸಾರ್ವಜನಿಕರ ಮೊಬೈಲ್ ಕರೆಗೆ ಸ್ಪಂಧಿಸಿದ ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಅವರು ಬುಧವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಪೊದೆಗಳ ತೆರವು ಕಾರ್ಯಾಚರಣೆ ನಡೆಸಿದರು.
ಈ ಪರಿಸರದಲ್ಲಿ ಸಂಜೆಯ ವೇಳೆಗೆ ಯುವಕರು ಗಾಂಜಾ ಸೇವನೆಯಲ್ಲಿ ನಿರತರಾಗಿರುತ್ತಾರೆ. ಗಾಂಜಾ ಮಾರಾಟಗಾರರು ಪ್ರತಿ ದಿನ ಇಲ್ಲಿಗೆ ಬಂದು ಗಾಂಜಾ ಪ್ಯಾಕೇಟ್‌ಗಳನ್ನು ಪೂರೈಕೆ ಮಾಡುತ್ತಾರೆ ಎಂಬ ಮೊಬೈಲ್ ದೂರು ಪೌರಾಯುಕ್ತೆ ಅವರಿಗೆ ಬಂದಿತ್ತು. ಪೊದೆ ತೆರವು ವೇಳೆ ಸ್ಥಳದಲ್ಲಿ ಸೇದಿ ಎಸೆದ ಸಿಗರೇಟಿನ ತುಂಡುಗಳು, ಪ್ಲಾಸ್ಟಿಕ್ ಖಾಲಿ ಪೊಟ್ಟಣಗಳು ಪತ್ತೆಯಾಗಿವೆ. ಪುತ್ತೂರು ನಗರಸಭೆಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಹಾಗೂ ಇಂಜಿನಿಯರ್‌ಗಳು ಕಾರ್ಮಿಕರ ಜೊತೆ ತೆರಳಿ ಕಾರ್ಯಾಚರಣೆ ಮಾಡಿದರು.
ಮಳೆಗಾಲದ ಕಾರಣದಿಂದ ಚರಂಡಿಗಳಲ್ಲಿ ನೀರು ಹರಿಯದ ವಾತಾವರಣ, ಅಕ್ರಮ ಚಟುವಟಿಕೆಗೆ ಪೂರಕವಾದ ಪೊದೆಗಳ ತಾಣಗಳಂತಹ ಯಾವುದೇ ಸಮಸ್ಯೆಗಳಿದ್ದರೆ ಸಾರ್ವಜನಿಕರು ತನಗೆ ಮಾಹಿತಿ ನೀಡಬೇಕು. ಜನರ ದೂರಿಗೆ ತ್ವರಿತ ಸ್ಪಂದನ ಮಾಡಲಾಗುವುದು ಎಂದು ರೂಪಾ ಟಿ. ಶೆಟ್ಟಿ ತಿಳಿಸಿದ್ದಾರೆ.

Leave a Comment