ಗಾಂಜಾ ಅಡ್ಡೆಗಳ ಮೇಲೆ ದಾಳಿ: 10 ಮಂದಿ ಬಂಧನ

ತಿಪಟೂರು, ನ. ೧೭- ತಾಲ್ಲೂಕಿನ ವಿವಿಧೆಡೆ ಗಾಂಜಾ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 3 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಗಾಂಧಿನಗರ ವಾಸಿ ಮಹಮದ್ ಇಮ್ರಾನ್, ಮನ್ಸೂರ್ ಅಲಿಯಾಸ್ ಉಕಾಡ್, ಸಾಕ್ಲೈನ್ ಮುಷ್ತಾಕ್, ಖಾಲಿದ್ ಪಾಷಾ, ಇಂದಿರಾನಗರ ವಾಸಿ ಸ್ವರೂಪ್, ಚಾಮುಂಡೇಶ್ವರಿ ಬಡಾವಣೆಯ ಸೋನು, ಹಳೇಬೀಡು ಗ್ರಾಮದ ಅಕ್ಬರ್ ಷರೀಫ್, ಶಿವು, ಚನ್ನರಾಯಪಟ್ಟಣ ತಾಲ್ಲೂಕಿನ ಮಂಜೇಗೌಡ ಹಾಗೂ ಮಾರನಗೆರೆ ವಾಸಿ ಸಚಿನ್ ಶರ್ಮ ಎಂಬುವರೇ ಬಂಧಿತ ಆರೋಪಿಗಳು.
ಬಂಧಿತರಿಂದ 5 ದ್ವಿಚಕ್ರ ವಾಹನಗಳು, ಸುಮಾರು ಎರಡೂವರೆ ಕೆ.ಜಿ. ಒಣ ಗಾಂಜಾ, 58 ಗಾಂಜಾ ಗಿಡಗಳು, ಗಾಂಜಾ ಬೀಜ ಹಾಗೂ ಹುಕ್ಕಾ ಸೇದುವ ಸಾಧನಗಳನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಹಾಗೂ ಇನ್ನಿತರ ಮಾದಕ ಪದಾರ್ಥಗಳ ಸೇವನೆಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದು, ಇಂತಹ ಮಾದಕ ವಸ್ತುಗಳನ್ನು ತಿಪಟೂರು ತಾಲ್ಲೂಕಿನಿಂದ ನಿರ್ಮೂಲನೆ ಮಾಡಲು ಇಲಾಖೆ ಬದ್ಧವಾಗಿದೆ. ಈ ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು, ಬೆಳೆಯುವವರು, ಬಳಸುವವರಿಗೂ ಎನ್‌ಡಿಪಿಎಸ್ ಕಾಯ್ದೆಯ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಅಬಕಾರಿ ನಿರೀಕ್ಷಕ ಕೆ.ಟಿ. ವಿಜಯ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ದಾಳಿಯಲ್ಲಿ ಉಪ ಅಬಕಾರಿ ಅಧೀಕ್ಷಕ ನಾರಾಯಣ್‌ನಾಯ್ಕ, ಅರುಣಕುಮಾರ್, ಕೆ.ಪಿ. ಲೋಕೇಶ್, ಎಂ.ಆರ್. ಸೋಮಶೇಖರ್, ಬಿ.ಎಲ್. ರವಿಶಂಕರ್, ಉಪನಿರೀಕ್ಷಕ ಗಂಗರಾಜು, ಜಿ.ಆರ್. ನಾಗರಾಜು, ಪ್ರಸನ್ನಸ್ವಾಮಿ ಪಾಲ್ಗೊಂಡಿದ್ದರು.

Leave a Comment