ಗಲಭೆ ಸೃಷ್ಟಿಸಿದ ವಾಟ್ಸ್‌ಆಪ್ ಸಂದೇಶ! ನಾಪತ್ತೆಯಾಗಿದ್ದ ಜೋಡಿ ಹಸೆಮಣೆಗೆ

ಮಂಗಳೂರು, ಮೇ ೧೫- ಕಿದೂರು ಕಳತ್ತೂರಿನ ಯುವತಿ ಹಾಗೂ ಕುಂಜತ್ತೂರು ನಿವಾಸಿ ಸುಪ್ರೀತ್(೨೫) ನಾಪತ್ತೆ ಪ್ರಕರಣ ತಿರುವು ಪಡೆದಿದ್ದು ಜೋಡಿ ಮದುವೆಯಾಗಿ ಪತ್ತೆಯಾಗಿದ್ದಾರೆ. ಇವರಿಬ್ಬರು ಕಳೆದ ೭ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಜೋಡಿ ಮನೆ ತೊರೆದು ಮದುವೆಯಾಗಿದೆ. ಕುಂಬಳೆ ಠಾಣಾ ವ್ಯಾಪ್ತಿಯ ಕಿದೂರು ಕಳತ್ತೂರಿನ ಪಂಚಮಿ ಎಂಬ ಯುವತಿಯನ್ನು ಸುಪ್ರೀತ್ ಪ್ರೀತಿಸುತ್ತಿದ್ದ. ಆದರೆ ಮನೆ ಮಂದಿ ಇವರ ಮದುವೆಗೆ ನಿರಾಕರಿಸಿದ್ದಾರೆ. ಬಿಟ್ಟು ಇರಲಾಗದ ಈ ಜೋಡಿ ಮನೆ ಬಿಟ್ಟು ತೆರಳಲು ನಿರ್ಧರಿಸಿದ್ದರು. ಅದರಂತೆ ಮೇ ೧೩ರ ಸೋಮವಾರ ಮನೆ ಬಿಟ್ಟು ಪರಾರಿಯಾಗಿದ್ದರು.
ಸುಪ್ರಿತ್ ತಾನು ಪ್ರೀತಿಸಿದ ಹುಡುಗಿಯನ್ನು ಮನೆಯಿಂದಲೇ ಕರೆ ತಂದಿದ್ದಾನೆ. ಇದನ್ನು ಕಂಡ ಸ್ಥಳೀಯರು ತಪ್ಪಾಗಿ ಗ್ರಹಿಸಿದ್ದು ಬ್ರಾಹ್ಮಣ ಮನೆತನದ ಯುವತಿಯನ್ನು ಅನ್ಯಮತೀಯ ಯುವಕ ಮನೆಯಿಂದಲೇ ಬಿಳಿಬಣ್ಣದ ಬೊಲೆರೋ ವಾಹನದಲ್ಲಿ ಅಪಹರಿಸಿದ್ದಾನೆ ಎಂಬುದಾಗಿ ಸುದ್ದಿ ವಾಟ್ಸ್ ಆಪ್‌ನಲ್ಲಿ ರವಾನಿಸಿದ್ದಾರೆ. ಅಪಹರಣದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ತಕ್ಷಣ ಸ್ಥಳೀಯರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಹಲವು ಕಡೆಗಳಲ್ಲಿ ವಾಹನಗಳನ್ನು ತಡೆದು ವಾಹನದಲ್ಲಿರುವ ಪ್ರಯಾಣಿಕರನ್ನು ವಿಚಾರಣೆ ನಡೆಸಿದ್ದಾರೆ. ಕುಂಬಳೆ ಬಂದ್ಯೋಡ್ ಸಮೀಪ ಕಾರೊಂದನ್ನು ತಡೆಗಟ್ಟಿ ಪುಡಿ ಮಾಡಲಾಗಿತ್ತು. ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕದಲ್ಲಿ ರಾತ್ರಿ ವೇಳೆ ಬೊಲೆರೋ ವಾಹನ ನಡೆದ ತಂಡ ವಾಹನವನ್ನು ಸಂಪೂರ್ಣ ಪುಡಿಗೈದಿದೆ. ಇದೇ ವೇಳೆ ಗುಂಪು ಘರ್ಷಣೆ ನಡೆದಿದೆ. ಇನ್ನು ಇದನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಕಲ್ಲು ತೂರಾಟದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದರು. ಜೋಡಿ ನಿನ್ನೆ ವಿಡಿಯೋ ಸಂದೇಶ ರವಾನಿಸಿದ್ದು ಅದರಲ್ಲಿ ತಮ್ಮಿಚ್ಛೆಯಂತೆಯೇ ಮದುವೆಯಾಗಿದ್ದಾಗಿ ಹೇಳಿಕೊಂಡಿದೆ.

Leave a Comment