ಗರ್ಭಾವಸ್ಥೆಯಲ್ಲಿ ಚರ್ಮದ ಸಾಮಾನ್ಯ ಸಮಸ್ಯೆಗಳು

ಗರ್ಭಾವಸ್ಥೆ ಮಹಿಳೆಯೊಬ್ಬಳ ಜೀವನದ ಅತ್ಯಂತ ಸೂಕ್ಷ್ಮ ಹಂತ. ಈ ಅವಧಿಯಲ್ಲಿ ಆಕೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಸೂಕ್ತ ಎಚ್ಚರಿಕೆಯಿಂದ ಇರುವುದರ ಮೂಲಕ ಆಕೆ ಈ ರೀತಿಯ ಸಮಸ್ಯೆಗಳಿಂದ ಮುಕ್ತಳಾಗಬಹುದು. ಹೊಟ್ಟೆಯಲ್ಲಿರುವ ಮಗುವಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಬಹುದು.
ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳು ಸಾಮಾನ್ಯವಾಗಿ ಹಾರ್ಮೋನುಗಳ ಏರುಪೇರಿನಿಂದ ದೇಹದ ಮೇಲೆ ಪ್ರತಿಕ್ರಿಯೆಯ ರೂಪದಲ್ಲಿ ಬದಲಾವಣೆ ಗೋಚರಿಸುತ್ತವೆ.
ಸಾಮಾನ್ಯವಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಬದಲಾವಣೆಗಳು, ಸಮಸ್ಯೆಗಳು ಹೆರಿಗೆಯ ಬಳಿಕ ತಂತಾನೇ ನಿವಾರಣೆಯಾಗುತ್ತದೆ. ಹಾಗೆಂದು ಅವುಗಳ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕೆಲವೊಂದು ಉಪಾಯಗಳ ಮೂಲಕ ಆ ಸಮಸ್ಯೆಗಳಿಗೆ ಮುಕ್ತಿ ಕಂಡುಕೊಂಡು ಗರ್ಭಾವಸ್ಥೆಯನ್ನು ಚಿಂತಾಮುಕ್ತ ಅವಧಿಯಾಗಿ ಮಾಡಿಕೊಳ್ಳಬಹುದು.
ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಚರ್ಮದಲ್ಲಿನ ಬದಲಾವಣೆಗಳು ಹಣೆ, ಕೆನ್ನೆ, ಗದ್ದದ ಮೇಲೆ ಕಂದು ವರ್ಣದ ಕಲೆಗಳು ಗೋಚರಿಸುತ್ತವೆ. ಇವನ್ನು `ಮೆಲಾಸ್ಮಾ` ಎಂದು ಹೇಳಲಾಗುತ್ತದೆ.
ಕಾಲು ತೊ‌ಡೆಗಳಲ್ಲಿ ವೇರಿಕೋಸ್ ವೇನ್ಸ್`ನ ಸಮಸ್ಯೆ ಉಂಟಾಗುತ್ತದೆ.
ಹೊಟ್ಟೆ, ಸೊಂಟ ಹಾಗೂ ತೊಡೆಭಾಗದಲ್ಲಿ ಎಳೆತ ಅಂದರೆ ಸ್ಟ್ರೆಚ್ ಕಲೆಗಳು ಉಂಟಾಗುತ್ತವೆ.
ಏನು ಕಾರಣ?
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಏರುಪೇರು ಉಂಟಾಗುತ್ತದೆ. ದೇಹದ ತೂಕ ಕ್ರಮೇಣ ಏರುತ್ತಿರುವುದರಿಂದ ಚರ್ಮದ ಮೇಲೆ ಈ ರೀತಿಯ ಬದಲಾವಣೆಗಳು ಗೋಚರಿಸುತ್ತವೆ. ಸೂಕ್ತ ಆಹಾರದ ಮೂಲಕ, ಆರೈಕೆಯ ಮೂಲಕ ಹಾಗೂ ತಕ್ಕಮಟ್ಟಿಗೆ ಚಿಕಿತ್ಸೆಯಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.
ಏನೇನು ಸಮಸ್ಯೆ?
ಮೊಡವೆಗಳು: ಹಾರ್ಮೋನುಗಳ ಅತಿಯಾದ ಉತ್ಪಾದನೆಯಿಂದ ಕೆಲವೊಂದು ಮಹಿಳೆಯರಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.
ತುರಿಕೆ: ಈ ಸಮಸ್ಯೆ ಸಾಮಾನ್ಯ ಸಂಗತಿ. ಮಾಯಿಶ್ಚರೈಸರ್ ಲೇಪಿಸಿ ತುರಿಕೆ ನಿವಾರಿಸಿಕೊಳ್ಳಬಹುದು.
ಸ್ಟ್ರೆಚ್ ಮಾರ್ಕ್: ಪಿಂಕ್ ಹಾಗೂ ಕೆಂಪು ವರ್ಣದ ಈ ಕಲೆಗಳು ಹೊಟ್ಟೆ ಹಾಗೂ ಸ್ತನ ಭಾಗದಲ್ಲಿ ಗೋಚರಿಸುತ್ತವೆ. ಶೇ. 90 ರಷ್ಟು ಗರ್ಭಿಣಿಯರು ತ್ವಚೆಯ ಸ್ಟ್ರೆಚ್ ಮಾರ್ಕ್`ನಿಂದ ಸಮಸ್ಯೆ ಅನುಭವಿಸುತ್ತಾರೆ.
ಪಿಗ್ಮೆಂಟೇಶನ್: ಗರ್ಭ ಧರಿಸುತ್ತಲೇ ಮಹಿಳೆಯ ದೇಹದಲ್ಲಿ ಹಾರ್ಮೋನುಗಳು ಉತ್ಪಾದನೆ ವೇಗ ಪಡೆದುಕೊಳ್ಳುತ್ತದೆ. ಈ ಕಾರಣದಿಂದ ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚುತ್ತದೆ. ಶೇ. 50 ರಷ್ಟು ಮಹಿಳೆಯರಲ್ಲಿ ಈ ರೀತಿಯ ಲಕ್ಷಣಗಳು ಗೋಚರಿಸಬಹುದು. ಸೆನ್ಸಿಟಿವ್ ಸ್ಕಿನ್ ಹೊಂದಿರುವ ಮಹಿಳೆಯರಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚು. ಎಸ್‌ಪಿಎಫ್ 15 ಇರುವ ಸನ್‌ಸ್ಕ್ರೀನ್‌ಗಳನ್ನು ಬಳಸಬೇಕು.
ಪ್ರೆಗ್ನೆನ್ಸಿ ಗ್ಲೊ: ಗರ್ಭಾವಸ್ಥೆಯಲ್ಲಿ ಮುಖ ಹೆಚ್ಚಾಗಿ ಹೊಳೆಯುತ್ತದೆ. ಇದಕ್ಕೆ ಪ್ರಮುಖ ಕಾರಣ ರಕ್ತ ಪರಿಚಲನೆ ಅಧಿಕಗೊಂಡಿರುವುದು. ಅದೇ ರೀತಿ ದೇಹದಲ್ಲಿ ತೈಲಗ್ರಂಥಿಗಳು ಹೆಚ್ಚು ಸಕ್ರಿಯಗೊಂಡು ಜಿಡ್ಡು ಉತ್ಪಾದನೆ ಮಾಡುತ್ತದೆ. ಚರ್ಮದ ಮೇಲೆ ಆಯಿಲ್ ಪ್ರೀ ಕ್ಲೆನ್ಸರ್ ಬಳಸುವುದರ ಮೂಲಕ ತೈಲದ ಜಿಡ್ಡಿನ ಸಮಸ್ಯೆಯಿಂದ ಮುಕ್ತರಾಗಬಹುದು.
ಆಕ್ನೆ ಅಥವಾ ಮೊಡವೆಗಳು
ಗರ್ಭಾವಸ್ಥೆಗಿಂತ ಮುಂಚಿನಿಂದಲೇ ಮೊಡವೆಗಳ ಸಮಸ್ಯೆಯಿಂದ ಬಳಲುವ ಮಹಿಳೆಯರಿಗೆ ಇದು ಗರ್ಭಾವಸ್ಥೆಯಲ್ಲಿ ಮತ್ತಷ್ಟು ಅಧಿಕಗೊಳ್ಳಬಹುದು. ಹೆಚ್ಚುವರಿ ಹಾರ್ಮೋನುಗಳ ಉತ್ಪಾದನೆ ತೈಲಗ್ರಂಥಿಗಳು ಸಕ್ರಿಯಗೊಳ್ಳುವುದು ಇದಕ್ಕೆ ಕಾರಣ. ಪ್ರತಿದಿನ ಮುಂಜಾನೆ ಹಾಗೂ ರಾತ್ರಿ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಅತಿಯಾಗಿ ಸ್ವಚ್ಛಗೊಳಿಸಿಕೊಳ್ಳುವುದು ಚರ್ಮ ಶುಷ್ಕಗೊಳ್ಳುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತಿರಬೇಕು.
ವೇರಿಕೋಸ್ ವೇನ್ಸ್
ದೇಹದಲ್ಲಿ ಅದರಲ್ಲೂ ಕಾಲುಗಳ ಭಾಗದಲ್ಲಿ ನೀಲಿ ಬಣ್ಣದ ನರಗಳ ಸಮೂಹ ಗೋಚರಿಸುತ್ತವೆ. ಅವು ಕೆಲವೊಮ್ಮೆ ನೋವಿನಿಂದ ಕೂಡಿರುತ್ತವೆ. ಈ ಸಂದರ್ಭದಲ್ಲಿ ಯಾವ ಚಿಕಿತ್ಸೆ ಮಾಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.
ಆದರೂ ಕೆಲವೊಂದು ಉಪಾಯಗಳನ್ನು ಅನುಸರಿಸುವುದರ ಮೂಲಕ ಈ ತೆರನಾದ ಸಮಸ್ಯೆಯಿಂದ ಅಷ್ಟಿಷ್ಟು ನಿರಾಳತೆ ಪಡೆದುಕೊಳ್ಳಬಹುದು. ಹೆಚ್ಚು ಹೊತ್ತು ಒಂದೇ ಕಡೆ ನಿಲ್ಲಬೇಡಿ. ಕುಳಿತಾಗ ಕಾಲುಗಳನ್ನು ಇಲಿಬಿಡದೆ ಸ್ಟೂಲ್ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳಿ. ದಿನಕ್ಕೆ ಅರ್ಧಗಂಟೆಯಾದರೂ ಕಾಲುಗಳು ತಲೆಗಿಂತ ಮೇಲ್ಭಾಗದಲ್ಲಿರುವಂತೆ ಕುಳಿತುಕೊಳ್ಳಿ ಅಥವಾ ಆ ರೀತಿಯಲ್ಲಿ ಮಲಗಿಕೊಳ್ಳಿ. ಅತಿಯಾದ ಭಾರವನ್ನು ಎತ್ತುವ ಪ್ರಯತ್ನ ಮಾಡಬೇಡಿ. `ಸಿ` ವಿಟಮಿನ್ ಇರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ ನರಗಳು ಆರೋಗ್ಯದಿಂದಿರಲು ಸಹಾಯವಾಗುತ್ತದೆ.
ಶುಷ್ಕತೆ ಮತ್ತು ತುರಿಕೆ
ಹೊಟ್ಟೆಯ ಭಾಗ ಬೆಳೆಯುತ್ತಾ ಹೋದಂತೆ ತ್ವಚೆಯಲ್ಲಿ ಎಳೆತ ಉಂಟಾಗುತ್ತದೆ. ಈ ಕಾರಣದಿಂದ ಅಲ್ಲಿ ಶುಷ್ಕತೆ ಉಂಟಾಗಿ ತುರಿಕೆ ಆಗುತ್ತದೆ. ಈ ಭಾಗದಲ್ಲಿ ತುರಿಕೆ ತೋಳುಗಳ ತನಕವೂ ಪಸರಿಸಬಹುದು.
ಹೊಟ್ಟೆಯ ಭಾಗದಲ್ಲಿ ತೇವಾಂಶ ಉಳಿಯುವಂತೆ ಮಾಡಲು ಆಂಟಿ ಇಚ್ ಕ್ರೀಮ್‌ಗಳನ್ನು ಲೇಪಿಸಬೇಕು.
ಲೀನಿಯಾ ನಿಗ್ರಾ: ಹಾರ್ಮೋನು ಏರುಪೇರಿನಿಂದ 4 ಹಾಗೂ 5ನೇ ತಿಂಗಳ ಗರ್ಭಾವಸ್ಥೆಯಲ್ಲಿ ಗಾಢವರ್ಣದ ಗೆರೆಗಳು ಗೋಚರಿಸುತ್ತವೆ. ಈ ತೆರನಾದ ಗುರುತುಗಳು ಹೆರಿಗೆಯ ಬಳಿಕ ತಂತಾನೇ ನಿವಾರಣೆಯಾಗುತ್ತವೆ.
ಸ್ಕಿನ್ ಟ್ಯಾಗ್: ಅತಿ ಸಣ್ಣ ಗಾತ್ರದ ಗುರುತುಗಳು ಕಂಕುಳು ಹಾಗೂ ಸ್ತನ ಭಾಗದಲ್ಲಿ ಕಂಡು ಬರುತ್ತವೆ. ಹೆರಿಗೆಯ ಬಳಿಕ ಇವು ತಂತಾನೇ ನಿವಾರಣೆ ಆಗುತ್ತವೆ. ಹೋಗದೆ ಇದ್ದರೆ ಕೆಲವೊಂದು ಉಪಾಯ ಅನುಸರಿಸಬೇಕಾಗುತ್ತದೆ.
ಡಾ. ರಮೇಶ್
ಅಲ್ಟಿಯಸ್ ಆಸ್ಪತ್ರೆ,
ದೂ. ಸಂಖ್ಯೆ: 080-23151873, 994000318
emil:endoram2006@yahoo.in

Leave a Comment