ಗರ್ಭಕೋಶ ಮತ್ತು ರಕ್ತಹೀನತೆ

ಗರ್ಭಕೋಶ ಎನ್ನುವುದು ಸ್ತ್ರೀಯರ ಅತಿ ಮುಖ್ಯ ಸಂತಾನೋತ್ಪತ್ತಿ ಅಂಗ. ಇದು ಸಂಪೂರ್ಣವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂತಾನೋತ್ಪತ್ತಿ ಪ್ರಕ್ರಿಯೆ ಸುಗಮವಾಗಿ ಸಾಗಲು ಸಾಧ್ಯ. ಒಂದು ವೇಳೆ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಭ್ರೂಣಬೆಳವಣಿಗೆಗೆ ಅವಕಾಶವೇ ದೊರೆಯುವುದಿಲ್ಲ.

ಗರ್ಭಕೋಶದ ಕೆಳಭಾಗವನ್ನು ಗರ್ಭಾಶಯದ ಗರ್ಭಕಂಠ ಎಂದು ಗರ್ಭಕೋಶದ ಒಳಪದರವನ್ನು ಎಂಡೋಮೆಟ್ರಿಯಂ ಎಂದು ಹೇಳುತ್ತಾರೆ.ಇದು ಜೀವಕೋಶಗಳ ದಪ್ಪ ಪದರ ಹೊಂದಿರುತ್ತದೆ. ಖುತುಚಕ್ರ ಸಮಯದಲ್ಲಿ ಮಾತ್ರ ಇದರಲ್ಲಿ ಬದಲಾವಣೆ ಕಂಡುಬರುತ್ತದೆ. ಮುಟ್ಟಿನ ಅವಧಿಯಲ್ಲಿ ರಕ್ತಸ್ರಾವ ಮೂಲಕ ಹೊರಹೋಗುತ್ತದೆ. ಪ್ರತಿ ಖುತುಚಕ್ರದ ಸಂದರ್ಭದಲ್ಲಿ ಇದು ಪುನ: ರಚನೆಗೊಳ್ಳುತ್ತದೆ. ಗರ್ಭ ನಿಲ್ಲಲು, ಅದನ್ನು ೯ ತಿಂಗಳು ಕಾಲ ಹಿಡಿದಿಟ್ಟುಕೊಳ್ಳಲು ಈ ಭಾವಗವೇ ಪ್ರಮುಖ ಪಾತ್ರ ವಹಿಸುತ್ತದೆ.

ಹಲವಾರು ಕಾರಣದಿಂದ ಗರ್ಭಕೋಶ ರಕ್ತಹೀನತೆಗೆ ತುತ್ತಾಗಿ ತನ್ನ ಒಟ್ಟಾರೆ ಕೆಲಸ ಕಾರ್ಯಗಳನ್ನು ನೆರವೇರಿಸಲು ಅಸಮರ್ಥಗೊಳ್ಳುತ್ತದೆ. ಯಾವ ಕಾರಣದಿಂದ ಗರ್ಭಕೋಶ ರಕ್ತಹೀನತೆಗೆ ತುತ್ತಾಗುತ್ತದೆ ಎಂಬುದನ್ನು ಅರಿತುಕೊಂಡು ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಗರ್ಭಕೋಶವನ್ನು ಪುನ: ಯಥಾಸ್ಥಿತಿಗೆ ತರಬಹುದಾಗಿದೆ.

ರಕ್ತಹೀನತೆ ಎಂದರೇನು :

ರಕ್ತದಲ್ಲಿ ಹಿಮೊಗ್ಲೋಬಿನ್ ಅಂಶ ಸಹಜ ಮಟ್ಟಕ್ಕಿಂತ ಕಡಿಮೆಯಾಗುವುದನ್ನೇ ರಕ್ತಹೀನತೆ ಅಥವಾ ಅನೀಮಿಯಾ ಎಂದು ಕರೆಯಲಾಗುತ್ತದೆ. ಕೆಂಪು ರಕ್ತಕಣಗಳಲ್ಲಿ ಇರುವ ಅಂಶವೇ ಹಿಮೊಗ್ಲೋಬಿನ್.

ರಕ್ತಹೀನತೆಗೆ ಏನು ಕಾರಣ?

ಮಹಿಳೆಯರಿಗೆ ಪ್ರತಿ ತಿಂಗಳು ಖುತುಸ್ರಾವ ಬರುತ್ತದೆ. ೪-೫ ದಿನಗಳ ಕಾಲ ಒಟ್ಟು ೮೦.ಎಂ.ಎಲ್ ನಷ್ಟು ರಕ್ತಸ್ರಾವ ಉಂಟಾಗುವುದು ಸಹಜ ಪ್ರಕ್ರಿಯೆ. ಈ ೪-೫ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ರಕ್ತಸ್ರಾವ ಆಗುವುದಿಲ್ಲ. ಹಾಗೇನಾದರೂ ಖುತುಚಕ್ರದ ಅವಧಿ ಬಿಟ್ಟು ಬೇರೆ ದಿನಗಳಲ್ಲಿ ರಕ್ತಸ್ರಾವ ಉಂಟಾದರೆ ಅದು ಅಸಾಮಾನ್ಯ ರಕ್ತಸ್ರಾವ ಅಥವಾ ಅಬ್ ನಾರ್ಮಲ್ ಬ್ಲೀಡಿಂಗ್ . ಈ ಸ್ಥಿತಿಯೇ ಮಹಿಳೆಯರಲ್ಲಿ ರಕ್ತಹೀನತೆಗೆ ಕಾರಣವಾಗುತ್ತದೆ.

ಈ ಕೆಳಕಂಡ ಸ್ಥಿತಿಯಲ್ಲಿ ಗರ್ಭಕೋಶದಿಂದ ರಕ್ತಸ್ರಾವ ಉಂಟಾಗಿ ರಕ್ತಹೀನತೆಯ ಸ್ಥಿತಿ ಉತ್ಪನ್ನವಾಗುತ್ತದೆ.

ಫೈಬ್ರಾಯ್ಡ್ ಗೆಡ್ಡೆಗಳು :

ಸಾಮಾನ್ಯವಾಗಿ ೩೦ರಿಂದ ೫೫ ವರ್ಷದವರೆಗಿನ ಮಹಿಳೆಯರಿಗೆ ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗೆಡ್ಡೆಗಳು ಉತ್ಪತ್ತಿಯಾಗಬಹುದು. ಬಹುತೇಕ ಇಂತಹ ಗೆಡ್ಡೆಗಳು ಕ್ಯಾನ್ಸರ್ ರಹಿತ ಗೆಡ್ಡೆಗಳಾಗಿರುತ್ತದೆ.

ಇದರ ಮುಖ್ಯ ಲಕ್ಷಣಗಳೆಂದರೆ, ಖುತುಸ್ರಾವದಲ್ಲಿ ಅಧಿಕ ರಕ್ತಸ್ರಾವ, ನೋವು, ಎದೆಬಡಿತ ಹೆಚ್ಚಾಗುವಿಕೆ, ಮೂತ್ರ ಮಾಡಲು ತೊಂದರೆಯಾಗುವಿಕೆ, ಸಮಾಗಮದಲ್ಲಿ ಕಿರಿಕಿರಿ ಉಂಟಾಗುವಿಕೆ, ಮಲವಿಸರ್ಜನೆಗೆ ತೊಂದರೆ, ಗರ್ಭಧಾರಣೆಗೆ ಅಡ್ಡಿ, ಬೆನ್ನುನೋವು, ಸಾಮಾನ್ಯ ಕೆಲಸ ಮಾಡಿದರೂ ಸುಸ್ತು ಉಂಟಾಗುತ್ತದೆ. ದೇಹ ಅತಿಯಾಗಿ ಬಿಸಿ ಅಥವಾ ತಂಪು ಆಗಬಹುದು. ಈ ಗೆಡ್ಡೆಗಳು ಬಂಜೆತನಕ್ಕೂ ಕಾರಣವಾಗಬಹುದು.

ಫೈಬ್ರಾಯಿಡ್ ಗೆಡ್ಡೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಅದರ ಗಾತ್ರ ದೊಡ್ಡದಾಗಿ ತುರ್ತುಸ್ಥಿತಿ ಉಂಟಾಗಬಹುದು.

ಪತ್ತೆ ಹಚ್ಚುವ ವಿಧಾನ :

ಸ್ಕ್ಯಾನಿಂಗ್ ಮಾಡಿ ಗೆಡ್ಡೆ ಪತ್ತೆ ಮಾಡಲಾಗುತ್ತದೆ. ಅದರಿಂದಲೂ ಗೊತ್ತಾಗದಿದ್ದರೆ ಎಂ.ಆರ್.ಐ. ಮುಖಾಂತರ ಅದಕ್ಕೂ ಹೆಚ್ಚಿನ ನಿಖರತೆಗೆ ಹಿಸ್ಟ್ರೋಸ್ಕೋಪಿ ಸಹಾಯ ಪಡೆಯಲಾಗುತ್ತದೆ.

ಚಿಕಿತ್ಸೆ :

ಚಿಕ್ಕಪುಟ್ಟ ಗೆಡ್ಡೆಯಿದ್ದರೆ ಅದಕ್ಕೆ ಚಿಕಿತ್ಸೆ ಅವಶ್ಯ ವಿರುವುದಿಲ್ಲ. ಕೆಲವು ಪ್ರಕಾರದ ಗೆಡ್ಡೆಗಳಿಗೆ ಹಾರ್ಮೊನು ಚಿಕಿತ್ಸೆ ಕೊಡಲಾಗುತ್ತದೆ. ಗೆಡ್ಡೆ ತುಂಭಾ ದೊಡ್ಡದಾಗಿದ್ದರೆ ಶಸ್ತ್ರಚಿಕಿತ್ಸೆ ಮಾಡಿ ತೆಗೆದುಹಾಕುವ ಚಿಕಿತ್ಸೆ ನೀಡಲಾಗುತ್ತದೆ. ಮಹಿಳೆಗೆ ಇನ್ನು ಮಕ್ಕಳು ಬೇಕಿಲ್ಲದಿದ್ದಲ್ಲಿ ೪೦ ವರ್ಷದ ನಂತರ ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆ ನೀಡಲಾಗುತ್ತದೆ.

ಎಂಡೊಮೆಟ್ರಿಯಲ್ ಪಾಲಿಪ್ : ಗರ್ಭಕೋಶದ ಪದರಿನಲ್ಲಿ ಒಂದು ಸಣ್ಣ ಬೀಜದ ಗಾತ್ರದಿಂದ ಹಿಡಿದು ಚೆಂಡಿನ ಆಕಾರದ ತನಕವೂ ಇದು ಬೆಳೆಯಬಹುದು. ಅದು ಬೆಳೆಯುತ್ತಾ ಹೋದಂತೆ ರಕ್ತಸ್ರಾವದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಸ್ಕ್ಯಾನಿಂಗ್ ಇಲ್ಲವೆ ಹಿಸ್ಟ್ರೋಸ್ಕೋಪಿ ಮುಖಾಂತರ ಅದರ ಸ್ಥಿತಿ ಗತಿ ಕಂಡುಕೊಳ್ಳಲಾಗುತ್ತದೆ. ಪಾಲಿಪ್ ಕ್ಯಾನ್ಸ್‌ರ್‌ಗೆ ಪರಿವರ್ತನೆ ಆಗಿದೆಯೇ ಎಂದು ಕಂಡುಕೊಳ್ಳಲು ಬಯಾಪ್ಸಿ ಟೆಸ್ಟ್ ಮಾಡಲಾಗುತ್ತದೆ.

ಪಿಐಡಿ :

ಗರ್ಭಕೋಶವು ಸೋಂಕು ಅಥವಾ ಇನ್‌ಪೆಕ್ಷನ್‌ನಿಂದ ಅನಾರೋಗ್ಯಕ್ಕೀಡಾಗುವ ಸ್ಥಿತಿಯೇ ಪೆಲ್ವಿಕ್ ಇನ್‌ಫ್ಲೇಮೆಟರಿ ಡಿಸೀಸ್ (ಪಿಐಡಿ) . ಇಂತಹ ಸ್ಥಿತಿಯಲ್ಲಿ ಆಕಸ್ಮಿಕವಾಗಿ ರಕ್ತಸ್ರಾವ ಆರಂಭವಾದರೆ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಿದ್ದರೆ ತಕಣದ ಚಿಕಿತ್ಸೆ ಅಗತ್ಯ. ಕೆಲವು ಆಂಟಿಬಯಾಟಿಕ್‌ಗಳು ಹಾಗೂ ಔಷಧಿಗಳ ಮುಖಾಂತರವೂ ಚಿಕಿತ್ಸೆ ಸಾಧ್ಯ. ಸೋಂಕಿನಿಂದ ಮುಕ್ತವಾಗಲು ಔಷಧಿ ಮಾತ್ರೆಗಳ ಜೊತೆಗೆ ಜನನಾಂಗಗಳ ಸ್ವಚ್ಛತೆಯ ಬಗ್ಗೆ ಗಮನ ಕೊಡಬೇಕು.

ಎಂಡೋಮೆಟ್ರಿಯಲ್ ಹೈಪರ್ ಪ್ಲೇಶಿಯಾ:

ಗರ್ಭಕೋಶದಲ್ಲಿ ಅತಿಯಾಗಿ ಈಸ್ಟ್ರೋಜೆನ್ ನಿಂದಾಗಿ ಅಸಾಮಾನ್ಯ ಸ್ಥಿತಿ ಉಂಟಾಗುತ್ತದೆ. ಪಿಸಿಓಎಸ್ ತೊಂದರೆಯಿರುವವರಿಗೆ ಇದರ ಅಪಾಯ ಹೆಚ್ಚು. ಸ್ಕ್ಯಾನಿಂಗ್ ಇಲ್ಲವೆ ಹಿಸ್ಟ್ರೋಸ್ಕೋಪಿಯ ಮುಖಾಂತರ ಗರ್ಭಕೋಶದ ಪೊರೆಯನ್ನು ಪರೀಕ್ಷೆ ನಡೆಸಿ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗುತ್ತದೆ.

ಎಂಡೋಮೆಟ್ರಿಯಲ್ ಕ್ಯಾನ್ಸರ್

ಮುಟ್ಟು ನಿಂತ ೧-೨ವರ್ಷದ ಬಳಿಕ ಆಕಸ್ಮಿಕವಾಗಿಯೇ ರಕ್ತಸ್ರಾವ ಆರಂಭವಾಗುತ್ತದೆ. ಒಮ್ಮೊಮ್ಮೆ ಇದು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಇನ್ನೊಮ್ಮೆ ಕಡಿಮೆ ಇರುತ್ತದೆ.ಅವಿವಾಹಿತರಿಗೆ , ಮಕ್ಕಳಾಗದೇ ಇರುವವರಿಗೆ, ಪಿಸಿಓ ಸಮಸ್ಯೆ ಇರುವವರಿಗೆ ಈ ರೀತಿಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚು.

ಕ್ಯಾನ್ಸರ್ ಯಾವ ಸ್ಥಿತಿಯಲ್ಲಿದೆ ಎಂದು ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಕೋಶಕ್ಕೆ ತುಂಬಾ ಹಾನಿಯಾಗಿದ್ದರೆ ಗರ್ಭಕೋಶವನ್ನೇ ತೆಗೆದು ಹಾಕಬೇಕಾಗುತ್ತದೆ.

ಗಮನ ಇರಲಿ :

ಮುಟ್ಟಿನ ಅವಧಿ ಹೊರತುಪಡಿಸಿ ಬೇರೆ ದಿನಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅದರ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಆರೋಗ್ಯದಲ್ಲಿ ಏರುಪೇರು, ಖುತುಚಕ್ರದಲ್ಲಿ ವ್ಯತ್ಯಾಸ ಆಗುತ್ತಿದ್ದರೆ ಆ ಬಗೆಗೂ ಗಮನವಿರಲಿ. ಇಂತಹ ಸಂದರ್ಭದಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡರೆ ನಿಮಗಾಗಿರುವ ತೊಂದರೆ ಏನು ಎಂಬುದು ಖಚಿತವಾಗುತ್ತದೆ.

ಚಿಕಿತ್ಸೆಯ ನಂತರ ಹೇಗೆ ಕಾಳಜಿ ವಹಿಸಬೇಕು?

ಫೈಬ್ರಾಯ್ಡ್ ಗೆಡ್ಡೆಯ ಶಸ್ತ್ರಚಿಕಿತ್ಸೆಗೊಳಪಟ್ಟವರು ಗಮನಿಸಬೇಕಾದ ಒಂದು ಸಂಗತಿಯೆಂದರೆ, ಅದು ಕೆಲವು ತಿಂಗಳುಗಳ / ವರ್ಷದ ಬಳಿಕ ಪುನ: ಬೆಳೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿ ೬ ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಮಾಡಿಸಿ ಸ್ಥಿತಿಗತಿ ತಿಳಿದುಕೊಳ್ಳಬೇಕು.

ಎಂಡೊಮೆಟ್ರಿಯಲ್ ಪಾಲಿಫ್ಸ್ ಪುನ: ಕಾಣಿಸಿಕೊಳ್ಳದಿರಲು ೩ ರಿಂ ೬ ತಿಂಗಳ ಕಾಲ ಹಾರ್ಮೊನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಎಂಡೋಮೆಟ್ರಿಯಲ್ ಹೈಪರ್ ಫ್ಲೇಶಿಯಾ ಇದ್ದವರು ಈಗಗಲೇ ಮಕ್ಕಳನ್ನು ಪಡೆದು ಇನ್ನು ಮುಂದೆ ಗರ್ಭ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದರೆ ಅಂತವರು ಹೆಚ್ಚಿನ ಸಮಸ್ಯೆ ಉಂಟಾಗದಿರಲು ಗರ್ಭಕೋಶವನ್ನೇ ತೆಗೆಸಿಹಾಕುವುದು ಒಳ್ಳೆಯದು. ಇನ್ನೂ ಮಕ್ಕಳು ಬೇಕು ಅನ್ನುವವರು ಸ್ಕ್ಯಾನಿಂಗ್ ಮಾಡಿಸಿಕೊಂಡು ಗರ್ಭಕೋಶ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿಕೊಳ್ಳಬೇಕು.

ಬೊಜ್ಜು ಇದ್ದವರಿಗೆ ಸಮಸ್ಯೆ ಜಾಸ್ತಿ ಇರುತ್ತದೆ. ಅಂತಹವರು ನಿಯಮಿತವಾಗಿ ವ್ಯಾಯಾಮ ಮಾಡಿ ಬೊಜ್ಜು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

ಮಾಹಿತಿಗೆ :

ಲೇಖಕರು :ಡಾ.ಬಿ.ರಮೇಶ್ , ಆಲ್ಟಿಯಸ್ ಹಾಸ್ಪಿಟಲ್: 9663311128/ 9900031842

Leave a Comment