ಗರ್ಭಕೋಶದ ಮೇಲೆ ಸಿಸೇರಿಯನ್ ಪರಿಣಾಮಗಳು

ಹೆರಿಗೆ ಎಂಬುದು ಸಹಜ ಪ್ರಕ್ರಿಯೆಯಲ್ಲ. ಅದೊಂದು ಕ್ಲಿಷ್ಟಕರ ನೋವುದಾಯಕ ಪ್ರಕ್ರಿಯೆ. ಮಗುವೊಂದು ಯಾವುದೇ ತೊಂದರೆಯಿಲ್ಲದೆ, ತಾಯಿಯ ಗರ್ಭದಿಂದ ಹೊರಬಂದರೆ ಅದೇ `ಸಹಜ ಹೆರಿಗೆ` ಎನಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಮಗು ತಾಯಿಯ ಗರ್ಭದಿಂದ ಹೊರಬರಲು ಹತ್ತು ಹಲವು ಅಡ್ಡಿ, ಆತಂಕಗಳು ಎದುರಾಗುತ್ತವೆ. ಆಗ ವೈದ್ಯರು ಅನಿವಾರ್ಯವಾಗಿ ಸಿಸೇರಿಯನ್ ಮಾಡಲೇಬೇಕಾದ ಸ್ಥಿತಿ ಉಂಟಾಗುತ್ತದೆ.
ಸಿಸೇರಿಯನ್ ಸಾಧಾರಣ ಶಸ್ತ್ರಚಿಕಿತ್ಸೆಯಲ್ಲ, ಅದೊಂದು ಸೂಕ್ಷ್ಮ ಶಸ್ತ್ರಚಿಕಿತ್ಸೆಯೇ ಹೌದು. ಗರ್ಭಕೋಶವನ್ನು ಕತ್ತರಿಸಿ ಮಗುವನ್ನು ಹೊರತೆಗೆಯುವುದರಿಂದ ಕೆಲವೊಮ್ಮೆ ಅದು ಅಕ್ಕಪಕ್ಕದ ಅಂಗಗಳ ಮೇಲೂ ಅಷ್ಟಿಷ್ಟು ಪರಿಣಾಮ ಉಂಟು ಮಾಡುತ್ತದೆ. ಈ ಕಾರಣದಿಂದ ಸಿಸೇರಿಯನ್‌ನ್ನು `ಮೇಜರ್ ಸರ್ಜರಿ`ಯಂದೇ ಪರಿಗಣಿಸಲಾಗುತ್ತದೆ.
ಯಾವುದೇ ಒಂದು ಶಸ್ತ್ರಚಿಕಿತ್ಸೆ ಅಡ್ಡ ಪರಿಣಾಮಗಳಿಂದ, ಕಾಂಪ್ಲಿಕೇಶನ್ಸ್`ನಿಂದ ಮುಕ್ತವಾಗಿಲ್ಲ. ವೈದ್ಯರು ಎಷ್ಟರಮಟ್ಟಿಗೆ ಎಚ್ಚರಿಕೆಯಿಂದ ಈ ಶಸ್ತ್ರಚಿಕಿತ್ಸೆ ಮಾಡುತ್ತಾರೊ, ಅವರು ಬಳಸುವ ಉಪಕರಣಗಳು ಎಷ್ಟು ಉತ್ಕೃಷ್ಟ ಮಟ್ಟದ್ದಾಗಿರುತ್ತವೆಯೊ ಆಗ ಕನಿಷ್ಠ ಪ್ರಮಾಣದಲ್ಲಿ ಕಾಂಪ್ಲಿಕೇಶನ್ಸ್ ಗೋಚರಿಸುತ್ತವೆ. ಯಾವ ಒಂದು ನಿರ್ದಿಷ್ಟ ಕಾರಣಕ್ಕಾಗಿ ವೈದ್ಯರು ಸಿಸೇರಿಯನ್ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪರಿಣಾಮಗಳು
ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದ ಎರಡು ರೀತಿಯ ಪರಿಣಾಮಗಳು ಉಂಟಾಗಬಹುದು. ತಕ್ಷಣದ ಪರಿಣಾಮಗಳು ಅಂದರೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿಯೇ ಉಂಟಾಗುವಂಥವು.
ಎರಡನೇ ರೀತಿಯ ಪರಿಣಾಮಗಳೇಂದರೆ, ಶಸ್ತ್ರಚಿಕಿತ್ಸೆ ನೆರವೇರಿಸಿದ ಅನೇಕ ದಿನಗಳ ಬಳಿಕ ಕಾಣಿಸಿಕೊಳ್ಳುವ ಪರಿಣಾಮಗಳು. ಅವನ್ನು ದೀರ್ಘಕಾಲಿಕ ಪರಿಣಾಮಗಳು ಎಂದೂ ಹೇಳಬಹುದು.
ತಕ್ಷಣದ ಪರಿಣಾಮಗಳು
ಮಗು ತಾಯಿಯ ಗರ್ಭದಲ್ಲಿ ಸಹಜ ಸ್ಥಿತಿಯಲ್ಲಿಲ್ಲ, ತಲೆ ಮೇಲೆ ಕಾಲು ಕೆಳಗೆ ಇರುವ ಸ್ಥಿತಿಯಲ್ಲಿದ್ದರೆ ಒಂದೇ ಗರ್ಭದಲ್ಲಿ ಒಂದಕ್ಕಿಂತ ಹೆಚ್ಚು ಅಂದರೆ 2 ಅಥವಾ 3 ಮಕ್ಕಳಿದ್ದರೆ, ಪ್ಲಾಸೆಂಟಾ ಅಂದರೆ ಮಾಸು ಕೆಳಭಾಗಕ್ಕೆ ಇದ್ದರೆ ಸಿಸೇರಿಯನ್ ಮಾಡಲೇಬೇಕಾಗುತ್ತದೆ. ಗರ್ಭಕೋಶವು ಮೂತ್ರಕೋಶ ಹಾಗೂ ಕರುಳಿನ ನಡುವೆ ಅಯಕಟ್ಟಿನ ಜಾಗದಲ್ಲಿ ಇರುವುದರಿಂದ ಅಪಾಯದ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.
2ನೇ ಸಲ, 3ನೇ ಸಲ ಶಸ್ತ್ರಚಿಕಿತ್ಸೆ ಆಗುತ್ತಿದ್ದರೆ ಬೇರೆ ಯಾವುದೋ ಕಾರಣಕ್ಕೆ ಶಸ್ತ್ರಚಿಕಿತ್ಸೆ ಆಗಿದ್ದರೆ ಅಂತಹ ಸಂದರ್ಭದಲ್ಲಿ ಒಳಗೆ ಕೆಲವು ಅಂಗಗಳು ಪರಸ್ಪರ ಅಂಟಿಕೊಂಡಿರುತ್ತವೆ. ಅವನ್ನು ಪರಸ್ಪರ ವಿಂಗಡಿಸುವ ಸಂದರ್ಭದಲ್ಲಿ ಆ ಅಂಗಗಳು ಗಾಯಗೊಳ್ಳಬಹುದು.
ರಕ್ತಸ್ರಾವ: ಪ್ಲಾಸೆಂಟಾ ಅಥವಾ ಮಾಸು ಮೇಲ್ಭಾಗದಲ್ಲಿ ಅಂಟಿಕೊಂಡಿದ್ದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಒಂದು ವೇಳೆ ಅದು ಕೆಳಭಾಗದಲ್ಲಿ ಅಂದರೆ ಮಗು ಹೊರಬರುವ ಮಾರ್ಗದಲ್ಲಿ ಅಂಟಿಕೊಂಡಿದ್ದರೆ ಮೊದಲು ಅದನ್ನು ಕತ್ತರಿಸಿಯೇ ಹೆರಿಗೆಯ ಮಾರ್ಗ ಸುಗಮಗೊಳಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ. ಹೊಟ್ಟೆಯಲ್ಲಿ 1 ಕ್ಕಿಂತ ಹೆಚ್ಚು ಮಕ್ಕಳಿದ್ದಾಗ ಗರ್ಭಕೋಶ ಸಹಜ ಪ್ರಕ್ರಿಯೆ ತೋರಿಸುವುದಿಲ್ಲ. ಗರ್ಭಕೋಶ ತೆರೆದು ಮಗುವನ್ನು ಹೊರತೆಗೆಯುವಾಗ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ.
ಸಾಮಾನ್ಯವಾಗಿ ಸಿಸೇರಿಯನ್‌ಗಾಗಿ ಗರ್ಭಕೋಶವನ್ನು 10ಸೆಂ.ಮಿ.ನಷ್ಟು ತೆರೆದು ಮಗುವನ್ನು ಹೊರತೆಗೆಯಲಾಗುತ್ತದೆ. ಒಂದು ವೇಳೆ ಕತ್ತರಿಸುವ ಪ್ರಮಾಣ ತುಸು ಹೆಚ್ಚಾದರೆ ದೊಡ್ಡ ದೊಡ್ಡ ರಕ್ತನಾಳಗಳಿಗೆ ಪೆಟ್ಟು ತಗುಲಿ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಮಗುವಿಗೆ ರಕ್ತ ಪೂರೈಕೆ ಸಮರ್ಪಕವಾಗಿರಲೆಂದು ಗರ್ಭಕೋಶದ ಆಸುಪಾಸಿನ ರಕ್ತನಾಳಗಳು ದೊಡ್ಡ ಗಾತ್ರ ಹೊಂದಿರುತ್ತವೆ. ಸಿಸೇರಿಯನ್ ಸಂದರ್ಭದಲ್ಲಿ ಈ ರಕ್ತನಾಳಗಳಿಗೆ ಸ್ವಲ್ಪ ಏಟು ತಗಲಿದರೂ ಗರ್ಭೀಣಿಯ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.
2 ಅಥವಾ 3ನೇ ಸಲ ಸಿಸೇರಿಯನ್ ಮಾಡುವ ಸಂದರ್ಭ ಬಂದಾಗ ಗರ್ಭಕೋಶ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಏಕೆಂದರೆ 2ನೇ ಅಥವಾ 3ನೇ ಸಲದ ಸಿಸೇರಿಯನ್ ಸಂದರ್ಭದಲ್ಲಿ ಗರ್ಭಕೋಶಕ್ಕೆ ಅಷ್ಟೊಂದು ಶಕ್ತಿ ಇರುವುದಿಲ್ಲ. ವೈದ್ಯರು ಆದಷ್ಟು ಮಟ್ಟಿಗೆ ಗರ್ಭಕೋಶವನ್ನುಳಿಸಲು ಪ್ರಯತ್ನಿಸುತ್ತಾರೆ. ಹಾಗೊಂದು ವೇಳೆ ಗರ್ಭಕೋಶಕ್ಕೆ ಹೆಚ್ಚಿನ ಅಪಾಯ ಇದೆ ಎಂದು ಗೊತ್ತಾದರೆ ಸಿಸೇರಿಯನ್ ಮಾಡುವ ಸಂದರ್ಭದಲ್ಲಿಯೇ ಗರ್ಭಕೋಶವನ್ನು ನಿವಾರಿಸುವ ಶಸ್ತ್ರಚಿಕಿತ್ಸೆಯನ್ನೂ ಕೈಗೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು `ಸಿಸೇರಿಯನ್ ಹಿಸ್ಟರೆಕ್ಟಮಿ` ಎಂದು ಕರೆಯುತ್ತಾರೆ.
ಗರ್ಭದ ಜತೆಗೆ ಫೈಬ್ರಾಯ್ಡ್ ಕೂಡ ಬೆಳೆದಿದ್ದರೆ ಮಗುವಿಗೆ ರಕ್ತ ಪೂರೈಕೆ ಮಾಡುವ ರಕ್ತನಾಳ ಗೆಡ್ಡೆಗೂ ರಕ್ತ ಪೂರೈಕೆ ಮಾಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಗೆಡ್ಡೆಯ ಜತೆಗೆ ಗರ್ಭಕೋಶವನ್ನು ನಿವಾರಿಸಬೇಕಾಗುತ್ತದೆ.
ಸಿಸೇರಿಯನ್ ಶಸ್ತ್ರಚಿಕಿತ್ಸೆಯಾದ ಕೆಲವು ದಿನಗಳವರೆಗೆ ಯಾವುದೇ ತೊಂದರೆ ಕಾಣಿಸಿಕೊಳ್ಳುವುದಿಲ್ಲ. 5-6 ದಿನಗಳ ಬಳಿಕ 10ರಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳಬಹುದು, ಜ್ವರ ಬರುವುದು, ಯೋನಿಯಿಂದ ರಕ್ತಸ್ರಾವ ಅದು ದುರ್ವಾಸನೆಯಿಂದ ಕೂಡಿರುತ್ತದೆ. ಎದೆಬಡಿತ ತೀವ್ರಗೊಳ್ಳಬಹುದು.
ಅಂಗಗಳು ಅಂಟಿಕೊಳ್ಳುವಿಕೆ: ಸಿಸೇರಿಯನ್ ಸಂದರ್ಭದಲ್ಲಿ ಗರ್ಭಕೋಶದ ಸುತ್ತಲಿನ ಅಂಗಗಳಾದ ಗರ್ಭನಾಳಗಳು, ಮೂತ್ರಕೋಶ ಕರುಳು ಇವೆಲ್ಲ ಅಂಟಿಕೊಂಡಿರುವ ಸಾಧ್ಯತೆಗಳಿರುತ್ತವೆ. ಅಂಗಗಳು ಪರಸ್ಪರ ಅಂಟಿಕೊಂಡಿರುವುದರಿಂದ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.
2ನೇ ಅಥವಾ 3ನೇ ಸಲದ ಸಿಸೇರಿಯನ್ ಸಂದರ್ಭದಲ್ಲಿ, ಹೊಲಿಗೆ ಹಾಕಿರುವ ಸಂದರ್ಭದಲ್ಲಿ ಮಾಸು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಮಾಸು ಕೆಳಭಾಗದಲ್ಲಿದ್ದರೆ ರಕ್ತಸ್ರಾವದ ಪ್ರಮಾಣ ಜಾಸ್ತಿ ಆಗುತ್ತದೆ. ಅತಿಯಾದ ರಕ್ತಸ್ರಾವದಿಂದಾಗಿ ಮಗುವಿಗೆ ಪೂರೈಕೆಯಾಗುವ ರಕ್ತದ ಪ್ರಮಾಣ ಕಡಿಮೆಯಾಗಿ ಮಗುವನ್ನು ಕಳೆದುಕೊಳ್ಳಬೇಕಾಗಿ ಬರಬಹುದು.
ಕರುಳಿನ ಸಮಸ್ಯೆಗಳು: ಒಳಗೆ ಅಂಗಗಳು ಅಂಟಿಕೊಂಡಿರುವುದರಿಂದ ಹೊಟ್ಟೆಯಲ್ಲಿ ಎಳೆದಂತಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಉಬ್ಬರಿಸಿದಂತಾಗುತ್ತದೆ. ಹೊಟ್ಟೆ ನೋವು, ತಿನ್ನಲು ಇಚ್ಛೆ ಉಂಟಾಗದಿರುವುದು ಇದರ ಮುಖ್ಯ ಲಕ್ಷಣಗಳು.
ಗರ್ಭಕೋಶದಲ್ಲಿನ ಸಮಸ್ಯೆಗಳಿಂದಾಗಿ ಮಾಸು ಸೋಂಕಿಗೀಡಾಗುತ್ತದೆ. ಈ ಕಾರಣದಿಂದ ಮುಂದಿನ ಬಾರಿ ಕೂಡಾ ಸಿಸೇರಿಯನ್‌ಗೆ ಒಳಗಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಚಿಕಿತ್ಸೆ ಏನು?
ಯಾವ ಸಮಸ್ಯೆ ಇರುತ್ತದೆಯೆನ್ನುವುದನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಾರೆ. ಸಿಸೇರಿಯನ್ ಬಳಿಕ ಯೋನಿ ರಕ್ತಸ್ರಾವ ಉಂಟಾದರೆ, ಅದು ದುರ್ವಾಸನೆಯಿಂದ ಕೂಡಿದ್ದರೆ, ಹೆಚ್ಚುವರಿ ಪ್ರಮಾಣದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆಗೊಳಗಾಗಬೇಕು.
ಮೂತ್ರ ಮಾಡುವಾಗ ಉರಿ ಅನಿಸುತ್ತಿದ್ದರೆ, ಜ್ವರ ಬರುತ್ತಿದ್ದರೆ, ಪದೇ ಪದೇ ಮೂತ್ರಕ್ಕೆ ಹೋಗಬೇಕೆನಿಸುತ್ತಿದ್ದರೆ ತಕ್ಷಣವೇ ಮೂತ್ರ ಪರೀಕ್ಷೆ ಮಾಡಿಸಿಕೊಂಡು ಯಾವ ಭಾಗಕ್ಕೆ ಸೋಂಕು ಉಂಟಾಗಿದೆಯೆಂದು ಕಂಡುಕೊಂಡು ಔಷಧಿ ಮಾತ್ರೆಗಳ ಮೂಲಕ ಅದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತದೆ.
ಗರ್ಭಕೋಶ ತೆಗೆಸಿಕೊಂಡ ಬಳಿಕ ರಕ್ತಸ್ರಾವ ಉಂಟಾದರೆ ಹಿಮೊಗ್ಲೋಬಿನ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗರ್ಭಕೋಶ ತೆಗೆಯಿಸಿಕೊಂಡಿರುವುದರಿಂದ ಋತುಸ್ರಾವವೇ ಉಂಟಾಗುವುದಿಲ್ಲ. ಆದರೆ ಕೆಲ ಅಸಹಜ ಬದಲಾವಣೆ ಉಂಟಾದರೆ ತಕ್ಷಣವೇ ವೈದ್ಯರನ್ನು ಕಾಣಬೇಕು.
2ನೇ, 3ನೇ ಸಲ ಗರ್ಭ ಧರಿಸಿದಾಗ ಸತತ ವೈದ್ಯರ ನಿರೀಕ್ಷಣೆಯಲ್ಲಿರಬೇಕು. ಏಕೆಂದರೆ ಮೊದಲ ಸಲ ಅಥವಾ ಎರಡನೇ ಸಲ ಸಿಸೇರಿಯನ್‌ನಿಂದಾಗಿ ಗರ್ಭಕೋಶದ ಶಕ್ತಿಯೂ ಕಡಿಮೆ ಇರುತ್ತದೆ. ಹೀಗಾಗಿ ನಿಗದಿತ ದಿನಾಂಕಕ್ಕಿಂತ 10 ದಿನಗಳ ಮುಂಚೆಯೇ ಹೆರಿಗೆಗೆ ಸಜ್ಜುಗೊಳಿಸಬೇಕಾಗುತ್ತದೆ.
ಸಿಸೇರಿಯನ್ ಬಳಿಕ ಏನೇನು ಕಾಳಜಿ ವಹಿಸಬೇಕು?
ಎಲ್ಲಾ ಶಸ್ತ್ರಚಿಕಿತ್ಸೆಗಳಿಗೂ ಅಷ್ಟಿಷ್ಟು ಕಾಂಪ್ಲಿಕೇಶನ್ಸ್ ಇದ್ದೇ ಇರುತ್ತವೆ. ಆದರೆ ಸಿಸೇರಿಯನ್ ಎನ್ನುವುದು ಸೂಕ್ಷ್ಮ ಶಸ್ತ್ರಚಿಕಿತ್ಸೆ. ಹೀಗಾಗಿ ಕೆಲ ದಿನಗಳ ಕಾಲ ಕಡ್ಡಾಯ ವಿಶ್ರಾಂತಿ ಮಾಡಲೇಬೇಕು. ಕೆಮ್ಮುವಾಗ, ಮಗುವಿಗೆ ಹಾಲುಣಿಸುವಾಗ, ಹೊಟ್ಟೆಗೆ ಹೆಚ್ಚು ಭಾರ ಬೀಳದಂತೆ ದಿಂಬಿನ ಆಶ್ರಯ ಪಡೆದುಕೊಳ್ಳಬೇಕು. ಮಗುವಿಗಿಂತ ಹೆಚ್ಚು ಭಾರ ಎತ್ತಲೇಬಾರದು. ಆದರೆ ವಾಕಿಂಗ್ ಮಾಡುವುದನ್ನು ತಪ್ಪಿಸಲೇಬಾರದು. ಏಕೆಂದರೆ ಪಾದದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಅದನ್ನು ತಡೆಗಟ್ಟಲು ವಾಕಿಂಗ್ ಅತ್ಯವಶ್ಯ. ಮಲಗಿಕೊಂಡಾಗಲೂ ಕಾಲುಗಳನ್ನು ಅತ್ತಿತ್ತ ಅಲ್ಲಾಡಿಸುತ್ತಿರಬೇಕು. ಗಾಯ ವಾಸಿ ಆಗುವವರೆಗೂ ಸೋಂಕು ಆಗದಂತೆ ನೋಡಿಕೊಳ್ಳಬೇಕು.
ಡಾ. ಬಿ.ರಮೇಶ್,
ಅನೀಶ್ ಆಸ್ಪತ್ರೆ,
ರಾಜಾಜಿನಗರ, ರಾಜರಾಜೇಶ್ವರಿ ನಗರ
endrorm2006@yahoo.in.

Leave a Comment