ಗರ್ಭಕೋಶದ ಕ್ಷಯ

ಮೈಕ್ರೊ ಬ್ಯಾಕ್ಟಿರೀಯರ್ ಟ್ಯೂಬರ್ ಕ್ಯುಲೊಸಿಸ್ ಎಂಬ ಬ್ಯಾಕ್ಟೀರಿಯಾ ಕ್ಷಯ ರೋಗಿಯ ಕಫದಲ್ಲಿರುತ್ತದೆ. ಕೆಮ್ಮಿದಾಗ, ಸೀನಿದಾಗ ಅದು ಇನ್ನೊಬ್ಬರ ದೇಹ ಪ್ರವೇಶಿಸುತ್ತದೆ. ಒಂದು

ವೇಳೆ ಇದೇ ಕ್ಷಯ ರೋಗಾಣು ಸಂತಾನೋತ್ಪತ್ತಿ ವಯೋಮಾನದ ಮಹಿಳೆಯರ ದೇಹದಲ್ಲಿ ಪ್ರವೇಶಿಸಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.

ಶೇ. 2 ರಿಂದ ಶೇ 10ರಷ್ಟು ಮಹಿಳೆಯರಲ್ಲಿ ಇದು ಬಂಜೆತನಕ್ಕೆ ಕಾರಣವಾಗಬಹುದು. ೨೫ ರಿಂದ 35 ವಯೋಮಾನದ ಶೇ. ೪ರಷ್ಟು ಮಹಿಳೆಯರಲ್ಲಿ ಇದು ಅತಿರಕ್ತಸ್ರಾವಕ್ಕೆ ಕಾರಣವಾಗಬಹುದು.

ಯಾರಿಗೆ ಈ ಸಮಸ್ಯೆ ?

ಅನಿಯಮಿತ ಜ್ವರ, ಕಿಬ್ಬೊಟ್ಟೆಯಲ್ಲಿ ಪದೇ ಪದೇ ನೋವು. ಔಷಧಿ ಮಾತ್ರೆ ಸೇವನೆ ಮಾಡಿದರೂ ಗುಣವಾಗದಿರುವುದು ಇದು ಕ್ಷಯ ರೋಗ ಉಂಟಾಗಿರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಬಿಳಿಸ್ರಾವ ಅತಿಯಾಗಿ ಹೋಗುತ್ತಿರುವುದು, ಚಿಕಿತ್ಸೆಯ ಬಳಿಕವೂ ಗುಣ ಕಾಣದಿರುವುದು ಕ್ಷಯ ರೋಗ ಬಂದಿರುವ ಸಾಧ್ಯತೆಯನ್ನು ತೋರಿಸುತ್ತದೆ.

health-pre-n2ಏನು ಕಾರಣ ?

ಕ್ಷಯ ರೋಗ ಮೊದಲು ದೇಹದ ಬೇರೆ ಅಂಗಕ್ಕೆ ಬಂದು ಅಲ್ಲಿಂದ ಗರ್ಭಕೋಶಕ್ಕೆ ಪ್ರವೇಶಿಸಿರುವ ಸಾಧ್ಯತೆಗಳೇ ಹೆಚ್ಚು. ಉದಾಹರಣೆಗೆ, ಶ್ವಾಸಕೋಶ ಅಥವಾ ಹೊಟ್ಟೆಯಿಂದ ಕ್ಷಯ ರೋಗಾಣುಗಳು ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಇರುವಾಗ ಗರ್ಭಕೋಶದ ಮೇಲೆ ದಾಳಿ ಮಾಡುತ್ತವೆ.

ಕ್ಷಯ ರೋಗ ಕೇವಲ ಗರ್ಭಕೋಶಕ್ಕಷ್ಟೇ ಅಲ್ಲ, ಸಂತಾನೋತ್ಪತ್ತಿ ಪ್ರಕ್ರಿಯೆ ಯಲ್ಲಿ ಪ್ರಮುಖ ಪಾತ್ರ ವಹಿಸುವ ಗರ್ಭನಾಳಗಳಿಗೂ ಅಪಾರ ಹಾನಿಯುಂಟು ಮಾಡುತ್ತದೆ.

ಪತಿಯು ಜನನಾಂಗ ಕ್ಷಯ ರೋಗದಿಂದ ಬಳಲುತ್ತಿದ್ದರೆ ಅದು ಲೈಂಗಿಕ ಸಂಪರ್ಕದ ಮೂಲಕ ಹೆಂಡತಿಗೂ ತಗುಲ ಬಹುದು.

ಯಾವ ಯಾವ ಅಂಗಗಳಿಗೆ ಹಾನಿ ?

ಸಾಮಾನ್ಯವಾಗಿ ಕ್ಷಯದ ರೋಗಾಣುಗಳು ಗರ್ಭಕೋಶಕ್ಕೆ ಹಾಗೂ ಗರ್ಭನಾಳಗಳಿಗೆ ಹಾನಿಯುಂಟು ಮಾಡುತ್ತವೆ. ಶೇ. ೯೦ರಷ್ಟು ಹಾನಿಯುಂಟಾಗುವುದು ಗರ್ಭನಾಳಗಳಿಗೆ. ಅಂಡಕೋಶ, ಗರ್ಭಕೋಶದ ಮೂತಿಗೆ ಹಾಗೂ ಯೋನಿ ಭಾಗಕ್ಕೂ ಅದು ಪಸರಿಸಿ ಬೇರೆ ತೆರನಾದ ಸಮಸ್ಯೆಗಳಿಗೆ ಕಾರಣವಾಗಬಹುದು.

ಏನೇನು ಲಕ್ಷಣಗಳು ? 

ಇದು ಸಾಮಾನ್ಯವಾಗಿ ೨೫ರಿಂದ ೩೫ ವಯೋಮಿತಿಯ ಮಹಿಳೆಯರನ್ನೇ ಬಾಧಿಸುತ್ತದೆ. ಶೇ. ೧೦ರಷ್ಟು ಮಹಿಳೆಯರಿಗೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಅವರಿಗೆ ಕಾರಣವಿಲ್ಲದೆ ಹೊಟ್ಟೆ ನೋವು, ಜ್ವರ, ಬಿಳಿಸ್ರಾವ ಉಂಟಾಗಬಹುದು.

ಶೇ. ೩೫ರಿಂದ ೬೫ರಷ್ಟು ಮಹಿಳೆಯರು ಬಂಜೆತನದ ತಕರಾರು ಹೇಳಿಕೊಂಡು ವೈದ್ಯದ ಬಳಿ ಹೋಗುತ್ತಾರೆ.

ಪರೀಕ್ಷೆ ಹೇಗೆ ?

ರಕ್ತಪರೀಕ್ಷೆ, ಎದೆಯ ಎಕ್ಸರೇ, ಟೋಟಲ್ ಕೌಂಟ್, ಮಾಂಟುಕ್ಸ್ ಟೆಸ್ಟ್, ಕಫದ ಪರೀಕ್ಷೆ ಮಾಡುವುದರ ಮೂಲಕ ಟಿಬಿ ಇರುವಿಕೆಯನ್ನು ಖಚಿತಪಡಿಸಲಾಗುತ್ತದೆ.  ಲ್ಯಾಪರೊಸ್ಕೋಪಿ ಮೂಲಕ ಗರ್ಭಕೋಶದಲ್ಲಿ ಎಲ್ಲಿಯಾದರೂ ಸಣ್ಣ ಸಣ್ಣ ಚುಕ್ಕಿಗಳಿವೆಯೇ ಎಂದು ಕಂಡುಕೊಳ್ಳಲಾಗುತ್ತದೆ. (TUBERCLES) ಅಲ್ಲಿನ ಒಂದಿಷ್ಟು ಭಾಗ ಬಯಾಪ್ಸಿ ಪರೀಕ್ಷೆಗೆ ಕಳಿಸಿ (TBPCR) ಕೊಡಲಾಗುತ್ತದೆ.  ಹಿಸ್ಟ್ರೋಸ್ಕೊಪಿಯೂ ಸಹ ಉಪಯೋಗಕ್ಕೆ ಬರುತ್ತದೆ.

ಚಿಕಿತ್ಸೆ ಏನು ?

ಗರ್ಭಕೋಶದಲ್ಲಿ ಕ್ಷಯ ಇರುವುದು ಖಾತ್ರಿಯಾದರೆ ಕನಿಷ್ಠ ೬ ತಿಂಗಳಿಂದ ೧ ವರ್ಷದವರೆಗೆ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ.

ರೋಗದ ತೀವ್ರತೆಯನ್ನು ಗಮನಿಸಿ ಚಿಕಿತ್ಸೆಯನ್ನು ಪುನಃ ೨ರಿಂದ ೪ ತಿಂಗಳ ಕಾಲ ಮುಂದುವರಿಸಬೇಕಾಗಿ ಬರಬಹುದು.

ಕ್ಷಯ ರೋಗದಿಂದ ಗರ್ಭನಾಳಗಳಿಗೆ ಯಾವುದೇ ಹಾನಿ ಆಗಿಲ್ಲ ಎನ್ನುವುದಾದರೆ ಸಹಜ ಗರ್ಭಧಾರಣೆಗೆ ಮುಂದಾಗಬಹುದು. ಒಂದು ವೇಳೆ ಗರ್ಭನಾಳಗಳಿಗೆ ಕ್ಷಯ ರೋಗ ಹಾನಿಯುಂಟು ಮಾಡಿದ್ದರೆ ಐವಿಎಫ್ ಮೂಲಕ ಗರ್ಭಧರಿಸಬೇಕಾಗುತ್ತದೆ.

ಮುಂಜಾಗೃತೆ ಏನು ?

ಜ್ವರ, ಕೆಮ್ಮು-ಕಫ ಹಾಗೆಯೇ ಮುಂದುವರಿದರೆ ೨೫-೩೫ ವಯಸ್ಸಿನ ಮಹಿಳೆಯರು ಆಂಟಿಬಯಾಟಿಕ್ನ್ನು ತೆಗೆದುಕೊಳ್ಳದೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮನೆಯಲ್ಲಿ ಯಾರಿಗಾದರೂ ಕ್ಷಯ ರೋಗದ ಲಕ್ಷಣ ಕಂಡುಬಂದಿದ್ದರೆ ಅವರಿಂದ ಆದಷ್ಟು ದೂರ ಇರಬೇಕು. ಹೊಟ್ಟೆ ನೋವು, ರಕ್ತಸ್ರಾವ ತೀವ್ರವಾಗಿದ್ದರೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು.

  • ಡಾ.ಬಿ.ರಮೇಶ್, ಆಲ್ಟಿಯಸ್ ಹಾಸ್ಪಿಟಲ್
  • # 915, 1ನೇ ಮಹಡಿ, ಧನುಷ್ ಪ್ಲಾಜಾ, ಐಡಿಯಲ್ ಹೋಮ್ಸ್ ಟೌನ್‌ಶಿಪ್,
  • ಗೋಪಾಲನ್ ಮಾಲ್ ಸಮೀಪ, ರಾಜರಾಜೇಶ್ವರಿನಗರ, ಬೆಂಗಳೂರು-98. 9663311128 / 080-28606789
  • ಶಾಖೆ : ರಾಜಾಜಿನಗರ – 9900031842/080-23151873

Leave a Comment