ಗಣ್ಯರ ಹತ್ಯೆಗೆ ಪಿಎಫ್ಐ ಸಂಚು

ಮೈಸೂರು, ನ. ೨೨- ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ತನ್ವೀರ್‌ಸೇಠ್‌ ಅವರ ಹತ್ಯೆ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹತ್ಯೆ ಯತ್ನದ ಹಿಂದೆ ಪಿಎಫ್‌ಐ ಸಂಘಟನೆ ಗಣ್ಯ ವ್ಯಕ್ತಿಗಳ ಹತ್ಯೆಗೆ ರೂಪಿಸಿದ್ದ ಸಂಚು ಬಯಲಾಗಿದೆ.

ಶಾಸಕ ಸೇಠ್ ಹತ್ಯೆಗೆ ವಿಫಲ ಯತ್ನ ನಡೆಸಿದ್ದ ಆರೋಪಿ ಫರಾನ್ ಬಂಧನದ ನಂತರ ಪೊಲೀಸರು ಅಬಿದ್ ಪಾಷಾ ಎಂಬಾತನನ್ನು ಬಂಧಿಸಿದ ತರುವಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಅಚ್ಚರಿಯ ಬೆಳವಣಿಗೆ ಎಂದರೆ ಹಿಂದೂ ಮುಖಂಡ ರಾಜು ಹತ್ಯೆಗೂ ಹಾಗೂ ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣಕ್ಕೂ ಸಂಪರ್ಕವಿರುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ.
ತನ್ವೀರ್ ಸೇಠ್ ಹತ್ಯೆ ಯತ್ನದ ಹಿಂದೆ ಪಿಎಫ್‌ಐ ಸಂಘಟನೆ ಕೈವಾ‌ಡವಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದ ಬೆನ್ನಲ್ಲೆ ಪಿಎಫ್‌ಐ ಸಂಘಟನೆ ಸಕ್ರಿಯವಾಗಿದೆ ಎಂಬುದಕ್ಕೆ ಪುಷ್ಠಿ ದೊರೆತಿದೆ.

ರಾಜು ಹತ್ಯೆಯ ಪ್ರಮುಖ ಆರೋಪಿ ಎನ್ನಲಾಗಿರುವ ಅಬಿದ್‌ಪಾಷ ಈ ಪ್ರಕರಣದ ಸೂತ್ರದಾರನಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಬಿದ್‌ನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದ ವೇಳೆ ಈ ಮಾಹಿತಿ ಲಭಸಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಸಕ್ರಿಯವಾಗಿವೆ ಎಂಬ ವಿಷಯವನ್ನು ವಿಚಾರಣೆ ವೇಳೆ ಪಾಷಾ ಬಾಯ್ಬಿಟ್ಟಿದ್ದಾನೆ. ಈ ತಂಡ ಗಣ್ಯ ವ್ಯಕ್ತಿಗಳ ಹತ್ಯೆಗೂ ಸಂಚು ರೂಪಿಸಿರುವ ಸ್ಫೋಟಕ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಒಂದು ತಂಡದಲ್ಲಿ 15 ಜನರಂತೆ ಕಾರ್ಯ ನಿರ್ವಹಿಸುತ್ತಿದ್ದು, ರಾಜಕಾರಣಿಗಳು, ಧರ್ಮಗುರುಗಳನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಗಣ್ಯ ವ್ಯಕ್ತಿಗಳ ಚಲನ-ವಲನದ ಬಗ್ಗೆ ನಿಗಾ ವಹಿಸುವ ಸಲುವಾಗಿ ಪ್ರತ್ಯೇಕ ತಂಡ ರಚನೆ ಮಾಡಿರುವ ಬಗ್ಗೆಯೂ ಮಾಹಿತಿಯನ್ನು ಖಾಕಿ ಪಡೆ ಸಂಗ್ರಹಿಸಿದೆ. ಪ್ರತಿಯೊಂದು ಹಂತದಲ್ಲೂ ಗಣ್ಯವ್ಯಕ್ತಿಗಳ ಚಲನ-ವಲನ ಮತ್ತು ಅದರ ಪರಿಣಾಮಗಳನ್ನು ಪಿಎಫ್‌ಐ ಸಂಘಟನೆ ಮುಖಂಡರಿಗೆ ಸದಸ್ಯರು ರವಾನಿಸುತ್ತಿದ್ದರು ಎಂದು ಹೇಳಲಾಗಿದೆ.

ತನ್ವೀರ್ ಸೇಠ್ ಹತ್ಯೆ ಯತ್ನ ಪ್ರಕರಣವನ್ನು ಇದೇ ರೀತಿ ನಿಗಾವಹಿಸಲಾಗಿತ್ತು. ಚುನಾವಣೆಯಲ್ಲಿ ರಾಜಕೀಯವಾಗಿ ಪರಾಭವಗೊಳಿಸಲು ಸಾಧ್ಯವಾಗದ ಕಾರಣ ಹತ್ಯೆಗೆ ಯತ್ನಿಸಲಾಗಿದೆ ಎಂಬ ವಿಚಾರವು ಹೊರ ಬಿದ್ದಿದೆ.

ರಾಜು ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಪಾಷಾ ಹೊರ ಬಂದಿದ್ದನು. ಈತನ ಜತೆಗೆ ಇನ್ನಿತರ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

ಘಟನೆ ನಡೆದ ದಿನದಂದು ಒಂದು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿಂದೆಯೂ ಶಾಸಕ ತನ್ವೀಠ್‌ ಸೇಠ್ ಅವರ ಕೊಲೆಗೆ ಹಲವು ಭಾರಿ ವಿಫಲ ಯತ್ನ ನಡೆಸಿದ್ದನು. ಮುಸ್ಲಿಂ ಸಮುದಾಯದವರೇ ಹೆಚ್ಚಾಗಿರುವ ಸ್ಥಳದಲ್ಲಿ ಹತ್ಯೆ ನಡೆಸಲು ಪಿತೂರಿ ನಡೆಸುತ್ತಿದ್ದ. ಮೈಸೂರಿನ ಮಿಲಾದ್ ಪಾರ್ಕ್ ಬಳಿಯೂ ತನ್ವೀರ್ ಸೇಠ್ ಕೊಲೆಗೆ ಯತ್ನ ನಡೆಸಿ ವಿಫಲನಾಗಿದ್ದ ವಿಷಯವು ತನಿಖೆ ವೇಳೆ ಬಹಿರಂಗವಾಗಿದೆ.

ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದ ಆರೋಪಿ ಫರಾನ್, ಅಬಿದ್ ಪಾಷಾಗೆ ತರಬೇತಿ ನೀಡಿದ್ದ ಅಂಶವೂ ಬಯಲಾಗಿದೆ. ಆರೋಪಿ ಫರಾನ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದರಿಂದ ಈ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದಾನೆ. ಪಾಷಾ ಜತೆ ಅಕ್ರಂ, ನೂರಾಖಾನ್, ಮುಜಿಪ್ ಹಾಗೂ ಮುಜಾಮಿನ್ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗಿದೆ.

ಶಾಸಕ ತನ್ವೀರ್ ಸೇಠ್ ಹೆಜ್ಜೆ ಜಾಡನ್ನು ಬೆನ್ನು ಹತ್ತಿರುವ ಪೊಲೀಸರು, ಕೇಂದ್ರ ಗುಪ್ತದಳದ ನೆರವು ಪಡೆಯಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ. ಮೂರು ದಿನಗಳಿಂದ ಕೇಂದ್ರ ಗುಪ್ತದಳದ ಅಧಿಕಾರಿಗಳ ತಂಡ ಮೈಸೂರಿನಲ್ಲಿ ಮೊಕ್ಕಾಂ ಹೂಡಿದ್ದು, ಓರ್ವ ಡಿಸಿಪಿ ಹಾಗೂ ಎಸ್‌ಪಿ ದರ್ಜೆಯ ಅಧಿಕಾರಿ ಸೇರಿ ಮೂವರ ಕೇಂದ್ರ ಗುಪ್ತದಳ ತಂಡ ಪೊಲೀಸರಿಗೆ ನೆರವು ನೀಡುತ್ತಿದ್ದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

* ತನ್ವೀರ್ ಸೇಠ್ ಕೊಲೆ ಯತ್ನಕ್ಕೆ ಹೊಸ ತಿರುವು.
* ಹಿಂದೂ ಮುಖಂಡ ರಾಜು ಹತ್ಯೆಗೂ ಸೇಠ್ ಕೊಲೆ ಯತ್ನಕ್ಕೂ ಸಾಮ್ಯತೆ.
* ಆರೋಪಿ ಅಬಿದ್ ಪಾಷಾ ಬಂಧನ.
* ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ.
* ಚುರುಕುಗೊಂಡ ತನಿಖೆ ಪಿಎಫ್‌ಐ ಕೈವಾ‌ಡ ಶಂಕೆ.
* ಪೊಲೀಸರಿಗೆ ಕೇಂದ್ರದ ಗುಪ್ತದಳ ನೆರವು.

Leave a Comment