ಗಣೇಶ ಹಬ್ಬವು ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿಯಾಗಿತ್ತು-ಶಾಸಕ ಅನಿಲ್ ಲಾಡ್

ಬಳ್ಳಾರಿ, ಸೆ.8: ಬ್ರಿಟೀಷರ ಕಪಿಮುಷ್ಟಿಯಿಂದ ದೇಶವನ್ನು ಸ್ವಾತಂತ್ರ್ಯಗೊಳಿಸಲು ನಮ್ಮ ಪೂರ್ವಜರು ಶ್ರೀ ಗಣೇಶ ಹಬ್ಬವನ್ನು ಸ್ಫೂರ್ತಿಯಾಗಿ ಬಳಸಿಕೊಂಡಿದ್ದರು ಎಂದು ಮಾಜಿ ಸಂಸದರು, ಬಳ್ಳಾರಿ ನಗರ ಶಾಸಕರು ಆದ ಅನಿಲ್ ಹೆಚ್ ಲಾಡ್ ರವರು ಅಭಿಪ್ರಾಯಪಟ್ಟರು.

ವಿಜಯ ಯುವಶಕ್ತಿ ಸೇವಾ ಸಂಘದವರ ವತಿಯಿಂದ ನಗರದ ಕುರುಬರ ವಸತಿ ನಿಲಯದ ಮೈದಾನದಲ್ಲಿ ನಿನ್ನೆ ಸಂಜೆ ಏರ್ಪಡಿಸಿದ್ದ ಶ್ರೀ ಗಣಪತಿ ಉತ್ಸವ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಆದ ಅನಿಲ್ ಹೆಚ್ ಲಾಡ್ ರವರು ಬ್ರಿಟೀಷರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ಭಾರತವನ್ನು ಸರ್ವಸ್ವಾತಂತ್ರ್ಯ ಸಾರ್ವಭೌಮ ರಾಷ್ಟ್ರವನ್ನಾಗಿ ಮಾಡಲು ಉಗ್ರವಾದ ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಲು ಮಹಾರಾಷ್ಟ್ರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ರವರು ಗಣೇಶೋತ್ಸವವನ್ನು ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿಯನ್ನಾಗಲು ಸಾರ್ವಜನಿಕ ಗಣೇಶೋತ್ಸವವನ್ನಾಗಿ ಮಾರ್ಪಡಿಸಿ ತನ್ಮೂಲಕ ದೇಶದ ಯುವಜನಾಂಗದಲ್ಲಿ ಸ್ವಾತಂತ್ರ್ಯದ ಚಳುವಳಿಯ ಕಿಚ್ಚನ್ನು ಹಚ್ಚಿದರು. ಅದು ಮುಂದೆ ಸ್ವಾತಂತ್ರ್ಯವನ್ನು ಗಳಿಸಲೂ ಸಹ ಕಾರಣವಾಯಿತು ಎಂದು ಅವರು ಅಭಿಪ್ರಾಯಪಟ್ಟರಲ್ಲದೆ, ಗಣೇಶ ಹಬ್ಬವು ಸರ್ವಜನಾಂಗಕ್ಕೆ ಸೇರಿದ ಹಬ್ಬವಾಗಿದ್ದು, ನಮ್ಮ ಯುವಕರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಅವರು ಪ್ರತಿಷ್ಠಾಪಿಸಿದ ಗಣೇಶ ಪ್ರತಿಮೆಗಳಿಗೆ ಅತ್ಯುತ್ತಮ, ಪ್ರಶಸ್ತಿ ಸೇರಿದಂತೆ ಒಟ್ಟಾರೆಯಾಗಿ 14 ಬಹುಮಾನಗಳನ್ನು ವಿತರಿಸುವ ಅಂಗವಾಗಿ ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು, ಯುವಕರು ಭಾಗವಹಿಸಿದ್ದರು, ಗಂಗಾವತಿ ಪ್ರಾಣೇಶ್ ಮತ್ತು ಅವರ ತಂಡದಿಂದ ಹಾಸ್ಯ ಕಾರ್ಯಕ್ರಮವು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ತಡರಾತ್ರಿಯವರೆಗೆ ಜರುಗಿದವು.

ಕಾರ್ಯಕ್ರಮದಲ್ಲಿ ಮೇಯರ್ ಗುಱ್ರಂ ವೆಂಕಟರಮಣ, ಪಾಲಿಕೆ ಸದಸ್ಯರಾದ ಕೆರೆಕೋಡಪ್ಪ, ಮುಖಂಡರಾದ ವೆಂಕಟಸ್ವಾಮಿ, ಚಂದ್ರ, ರಾಮಾಂಜಿನಿ, ಜೈನ ಸಮಾಜದ ಗಿರಿಲಾಲ್ ಜೈನ್, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಡಾ|| ರಮೇಶ್ ಗೋಪಾಲ್, ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.

Leave a Comment