ಗಣೇಶ ವಿಸರ್ಜನೆ ವೇಳೆ ಇಬ್ಬರು ಬಾಲಕರು ನೀರು ಪಾಲು

ತುರುವೇಕೆರೆ, ಅ. ೪- ಕೆರೆಯಲ್ಲಿ ಗಣಪತಿ ಬಿಡಲು ಹೋದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ನಾಗೇಗೌಡನ ಪಾಳ್ಯದಲ್ಲಿ ನಡೆದಿದೆ.
ನಾಗೇಗೌಡನ ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮದನ್ ಮತ್ತು ಸೋಮಶೇಖರ್ ಎಂಬುವರೇ ಮೃತಪಟ್ಟಿರುವ ದುರ್ದೈವಿ ವಿದ್ಯಾರ್ಥಿಗಳು. ಈ ಇಬ್ಬರು ಬಾಲಕರು ಸೈಕಲ್ ಮೇಲೆ ಗಣಪನ ಮೂರ್ತಿಯನ್ನು ಇಟ್ಟುಕೊಂಡು ಗಣಪನಿಗೆ ಜೈಕಾರ ಹಾಕುತ್ತಾ ಗ್ರಾಮದ ಹೊರಗಿರುವ ಕಟ್ಟೆ ಬಳಿ ತೆರಳಿದ್ದಾರೆ. ಸೈಕಲ್‌ನ್ನು ಕಟ್ಟೆ ಬಳಿ ನಿಲ್ಲಿಸಿ ಗಣಪನ ಮೂರ್ತಿಯನ್ನು ನೀರಿನಲ್ಲಿ ಬಿಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಮಕ್ಕಳು ಮನೆಗೆ ಬಾರದಿದ್ದನ್ನು ಗಮನಿಸಿದ ಪೋಷಕರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ನಂತರಕಟ್ಟೆಯ ಬಳಿ ಸೈಕಲ್ ನಿಂತಿರುವುದನ್ನು ಕಂಡು ಧಾವಿಸಿ, ಕಟ್ಟೆಯಲ್ಲಿ ಹೂಗಳು ತೇಲುತ್ತಿರುವುದನ್ನು ಕಂಡಿದೆ. ಮಕ್ಕಳು ಕಟ್ಟೆಯೊಳಗೆ ಮುಳುಗಿರಬಹುದು ಎಂಬ ಸಂದೇಹ ವ್ಯಕ್ತಪಡಿಸಿ ಕಟ್ಟೆಯಲ್ಲಿ ಇಳಿದು ಹುಡುಕಾಡಿದಾಗ ಮಕ್ಕಳ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿದ ಕೂಡಲೇ ಶಿಕ್ಷಣಾಧಿಕಾರಿ ರಂಗಧಾಮಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಜಿ.ಪಂ. ಸದಸ್ಯೆ ಜಯಲಕ್ಷ್ಮಿ, ಜಿ.ಪಂ. ಮಾಜಿ ಸದಸ್ಯ ಜಯರಾಮ್ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂಬಂಧ ತುರುವೇಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment