ಗಣೇಶ, ಮೋಹರಂ ಹಬ್ಬ : ಶಾಂತಿ ಪಾಲನೆ ಸಭೆ

 ಶಾಂತಿಯುತ ಗಣೇಶ ಚತುರ್ಥಿ ಆಚರಿಸಿ – ಎಸ್ಪಿ
ರಾಯಚೂರು.ಸೆ.07- ಗಣೇಶ ಚತುರ್ಥಿ ಹಾಗೂ ಮೋಹರಂ ಹಬ್ಬ ಶಾಂತಿಯುತವಾಗಿ ಆಚರಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ನಿಗಾ ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹೇಳಿದರು.
ಅವರಿಂದು ಸ್ಥಳೀಯ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಗಣೇಶ ಚತುರ್ಥಿ ಹಾಗೂ ಮೋಹರಂ ಹಬ್ಬದ ಶಾಂತಿ ಸಭೆ ಉದ್ದೇಶಿಸಿ ಮಾತನಾಡುತ್ತಾ, ಸಾರ್ವಜನಿಕರು ಕಾನೂನಿನ ಚೌಕಟ್ಟಿನಲ್ಲಿ ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಂದು ಎಚ್ಚರಿಕೆ ನೀಡಿದರು. ಗಣೇಶ ಚತುರ್ಥಿ ಜೊತೆಗೆ ಮೋಹರಂ ಇರುವುದರಿಂದ ಪರಸ್ಪರ ಸಮುದಾಯದ ಮುಖಂಡರ ಸಹಭಾಗಿತ್ವದಲ್ಲಿ ಹಬ್ಬ ಹರಿದಿನಗಳನ್ನು ಆಚರಿಸಬೇಕು.
ವಿಘ್ನವಿನಾಯಕನಿಗೆ ಯಾವುದೇ ಅಡ್ಡ-ಆತಂಕ ಎದುರಾಗದಂತೆ ನೋಡಿಕೊಳ್ಳುವುದು ಗಣೇಶ ಮಂಡಳಿಯ ಮುಖಂಡರ ಕಾರ್ಯವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿಯನ್ನು ಶಾಂತಿಯುತವಾಗಿ ಆಚರಿಸಲು ಈಗಾಗಲೇ ಪೊಲೀಸ್ ಇಲಾಖೆ ವಿವಿಧ ಗಜಾನನ ಮಂಡಳಿ ಮುಖಂಡರಿಗೆ ಸಲಹೆ, ಸೂಚನೆ ನೀಡಲಾಗಿದೆ. ಗಣೇಶ ಪೆಂಡಾಲ್ ಬಳಿ ವಿದ್ಯುತ್ ಅವಘಡಕ್ಕೆ ಆಸ್ಪದ ನೀಡದಂತೆ ನಿಗಾವಹಿಸಬೇಕು.
ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಯಾವುದೇ ಕಾರ್ಯಕ್ರಮ ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗುತ್ತದೆಂದರು. ಡಿವೈಎಸ್ಪಿ ಜಿ.ಹರೀಶ್ ಪ್ರಸ್ತಾವಿಕ ಮಾತನಾಡಿ, ಗಣೇಶ ವಿಸರ್ಜನೆ ದಿನದಂದು 2 ಬೇಸ್, 2 ಸ್ಪೀಕರ್ ಧ್ವನಿವರ್ತಕ ಮಾತ್ರ ಅಳವಡಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ವಿವಿಧ ಗಜಾನನ ಮಂಡಳಿಯೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದಲ್ಲಿ ನಗರಸಭೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಖಾಸಗಿ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದಲ್ಲಿ ಸ್ಥಳ ಮಾಲೀಕನ ಅನುಮತಿ ಪಡೆಯಬೇಕು.
ನಗರಾದ್ಯಂತ ಪ್ರತಿಷ್ಠಾಪಿಸುವ ಗಜಾನನ ಮಂಡಳಿಗಳು ಪರವಾನಿಗೆ ಪಡೆಯಲು ಸ್ಥಳೀಯ ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಗರಸಭೆ, ಜೆಸ್ಕಾಂ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬೇಕು. ಗಣೇಶ ವಿಸರ್ಜನೆ ದಿನದಂದು 3 ಕ್ರೇನ್ ವ್ಯವಸ್ಥೆ ನಗರದ ಖಾಸಬಾವಿ ಬಳಿ ಮಾಡಲಾಗುತ್ತದೆ. ಗಣೇಶ ಪ್ರತಿಷ್ಠಾಪಿಸುವ ವೇಳೆ ಯಾವುದೇ ಕಾರಣಕ್ಕೂ ಜೆಸಿಬಿ, ಕ್ರೇನ್ ಅಳಡಿಸಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್, ಸಿಪಿಐ, ಪಿಎಸ್ಐ ಸೇರಿದಂತೆ ವಿವಿಧ ಗಜಾನನ ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Comment