ಗಣೇಶೋತ್ಸವದ ಸಂಭ್ರಮದಲ್ಲಿ ಯುವಪಡೆ….

ದಾವಣಗೆರೆ ಸೆ 12: ದೇಶದ ಬಹುದೊಡ್ಡ ಹಬ್ಬ ಗಣೇಶೋತ್ಸವಕ್ಕೆ ರಾಜ್ಯದ ಮಧ್ಯಭಾಗವಾದ ದಾವಣಗೆರೆಯೂ ಸಹ ಸಂಪೂರ್ಣ ಸಜ್ಜುಗೊಂಡಿದೆ. ವಿಘ್ನನಿವಾರಕನ ಆಗಮನಕ್ಕೆ ಜನತೆ ಮತ್ತೊಮ್ಮೆ ಕಾತುರದಿ ಕಾಯುತ್ತಿದ್ದಾರೆ. ಅತ್ಯಂತ ಉತ್ಸಾಹದಿಂದ ಗಣೇಶೋತ್ಸವದ ಸಂಭ್ರಮದಲ್ಲಿದ್ದಾರೆ. ನಗರದ ಹಳೇಪೇಟೆ, ವಿನೋಬನಗರ, ನಿಟ್ಟುವಳ್ಳಿ, ಕೊಂಡಜ್ಜಿ ರಸ್ತೆ, ಪಿಸಾಳೆ ಕಾಂಪೌಂಡ್, ಕೆಟಿಜೆ ನಗರ, ವಿದ್ಯಾನಗರ, ಎಂ ಸಿಸಿ ” ಎ’ ಮತ್ತು ಬಿ ಬ್ಲಾಕ್ , ರಾಂ ಅಂಡ್ ಕೋ ವೃತ್ತ, ದುರ್ಗಾಂಭಿಕಾ ದೇವಾಸ್ಥಾನ ರಸ್ತೆ, ಹದಡಿ ರಸ್ತೆ, ನಿಜಲಿಂಗಪ್ಪ ಬಡಾವಣೆ ಸೇರಿದಂತೆ ಎಲ್ಲೆಡೆ ಯುವಕರ ಗುಂಪು ಗಣೇಶನ ಪ್ರತಿಷ್ಠಾಪನೆಗೆ ಸಜ್ಜಾಗಿದ್ದಾರೆ. ಗಣಪನ ಆರಾಧನೆಗೆ ಕಳೆದೊಂದು ವಾರದಿಂದಲ್ಲೂ ತಯಾರಿಯಲ್ಲಿ ತೊಡಗಿದ್ದಾರೆ. ಅಷ್ಟೆ ಅಲ್ಲ ಗ್ರಾಮಾಂತರ ಭಾಗಗಳಲ್ಲಿಯೂ ಸಹ ಯುವಕರ ಪಡೆ ಗಣೇಶನ ಆರಾಧನೆಗೆ ಸಜ್ಜುಗೊಂಡಿದ್ದಾರೆ. ಗಣನಾಯಕನ ಆರಾಧನೆಯು ಮಹತ್ವ ಪಡೆದಿದೆ. ಪ್ರಥಮ ಪೂಜಿತನೆಂದೆ ಗುರುತಿಸಿಕೊಂಡಿರುವ ಗಣೇಶನಿಗೆ ಹೆಚ್ಚಿನ ಮಾನ್ಯತೆ. ನಮ್ಮ ಪೂರ್ವಜರು ಹೇಳುವಂತೆ ಗಣಪತಿಯ ಅನುಮತಿ ಇಲ್ಲದೇ ಯಾವುದೇ ದಿಕ್ಕಿನಿಂದ ಇತರೆ ದೇವತೆಗಳು ಪೂಜಾ ಸ್ಥಳಕ್ಕೆ ಬರಲಾರರು ಆದ್ದರಿಂದ ಮಂಗಳ ಕಾರ್ಯಗಳಲ್ಲಿ ಅಥವಾ ಇತರೆ ಪೂಜಾ ಕಾರ್ಯಗಳಲ್ಲಿ ಮೊದಲು ಗಣಪತಿಯ ಪೂಜೆ ನೆರವೇರಿಸಲಾಗುತ್ತದೆ. ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಗಣೇಶ ಚತುರ್ಥಿಯ ಆಚರಣೆ ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನ ಬರುತ್ತದೆ. ಅಂದಿನ ದಿನ ಅತ್ಯಂತ ಪ್ರಾಮುಖ್ಯತೆ ಪಡೆದಿದೆ ಅನಾದಿಕಾಲದಿಂದಲೂ ಗಣೇಶನ ಪೂಜೆ ನಡೆದುಕೊಂಡು ಬಂದಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಒಗ್ಗೂಡಿಸಲು ಹಾಗೂ ಸ್ವಾತಂತ್ರ್ಯ ಪಡೆಯಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇದೀಗ ಅತ್ಯಂತ ವಿಜೃಂಭಣೆಯ ಆಚರಣೆಯಾಗಿದೆ.
 ಮಾರಾಟಕ್ಕೆ ಸಜ್ಜಾಗಿವೆ ವಿವಿಧ ಬಗೆಯ ಗಣೇಶ ಮೂರ್ತಿಗಳು
ದಾವಣಗೆರೆಯ ಅನೇಕ ಭಾಗಗಳಲ್ಲಿ ವಿವಿಧ ವಿನ್ಯಾಸದ ಗಣೇಶನ ಮೂರ್ತಿಗಳು ಮಾರಾಟಕ್ಕೆ ಸಜ್ಜಾಗಿವೆ, ಪ್ರತಿ ಬಾರಿಯಂತೆ ಪಿಒಪಿ ಗಣೇಶನ ಮೂರ್ತಿಗಳಿಗೆ ಕಡಿವಾಣ ಹಾಕಲಾಗಿದೆ. ಗಣೇಶನ ಹಬ್ಬ ಬಂದರೆ ಸಾಕು ಕಲಾವಿದರ ಕೈ ಚಳಕದಲ್ಲಿ ವಿವಿಧ ಬಗೆಯ ಗಣೇಶ ವಿಗ್ರಹಗಳು ರೂಪುಗೊಳ್ಳುತ್ತವೆ. ನಗರದ ಕಾಯಿಪೇಟೆ ಸೇರಿದಂತೆ ಹಲವೆಡೆ ಸ್ಥಳದಲ್ಲೆ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. 100 ರೂ ನಿಂದ 5 ಸಾವಿರದವರೆಗಿನ ಗಣಪ ಮೂರ್ತಿಗಳು ಸಿದ್ದಗೊಂಡಿವೆ.

Leave a Comment