ಗಣೇಶನ ವಿಸರ್ಜನೆಗೆ 22 ಕೆರೆಗಳಲ್ಲಿ ಅವಕಾಶ

ಬೆಂಗಳೂರು, ಸೆ. ೧೨- ನಗರದ ಹಲಸೂರು, ಸ್ಯಾಂಕಿ, ಯಡಿಯೂರು ಕೆರೆಗಳು ಸೇರಿದಂತೆ, 22 ಕೆರೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗಣೇಶ ವಿಗ್ರಹಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೇಯರ್ ಆರ್. ಸಂಪತ್ ರಾಜ್ ಅವರು ಇಂದಿಲ್ಲಿ ತಿಳಿಸಿದರು.
ನಗರದ ಹಲಸೂರು ಕೆರೆಯಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ನಿರ್ಮಿಸಿರುವ ವಿಶೇಷ ಕಲ್ಯಾಣಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಕೆರೆಗಳಲ್ಲಿ ನಿರ್ಮಿಸಿರುವ ಕಲ್ಯಾಣಿಗಳ ಮುಂದೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಣೇಶ ವಿಗ್ರಹವನ್ನು ವಿಸರ್ಜನೆಗಾಗಿ ಬಂದವರು ಟೋಕನ್ ಪಡೆದು ಕ್ಯೂನಲ್ಲಿ ನಿಲ್ಲಬೇಕು. ನಂತರ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪಿಒಪಿ ಗಣೇಶ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿ ಅವುಗಳನ್ನು ಪ್ರತ್ಯೇಕಗೊಳಿಸಲಾಗುವುದು. ಯಾರೂ ಅನ್ಯತಾ ಭಾವಿಸಬಾರದು. ಮಣ್ಣಿನ ಗಣೇಶ ವಿಗ್ರಹಗಳನ್ನು ಮುಳುಗಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರತಿ ಕೆರೆಗಳಲ್ಲಿ ನಿರ್ಮಿಸಿರುವ ಕಲ್ಯಾಣಿಗಳಲ್ಲಿ ರಾತ್ರಿ 10.30ರವರೆಗೆ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುವುದು. ಅವಧಿ ಮುಗಿದುಹೋದರೆ, ಕಲ್ಯಾಣಿಗಳ ಮುಂಭಾಗ ಇಡಲಾಗಿರುವ ಟೇಬಲ್‌ಗಳಲ್ಲಿ ಗಣೇಶ ವಿಗ್ರಹ ಇಟ್ಟು ವಾಪಾಸ್ ಆಗಬಹುದು ಎಂದರು.
ಪ್ರತಿ ಕೆರೆಗಳಲ್ಲಿ ಯಾವುದೇ ಅಹಿತಕರ ಘಟನೆ ಉಂಟಾಗದಂತೆ, ಅಗ್ನಿಶಾಮಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುಳುಗು ತಜ್ಞರ ತಂಡವನ್ನೂ ನೇಮಿಸಲಾಗಿದೆ. ಆಂಬ್ಯುಲೆನ್ಸ್ ಜೊತೆಗೆ ವೈದ್ಯರ ತಂಡವೂ ಇದ್ದು, ಅವಘಡಗಳನ್ನು ಎದುರಿಸಲಾಗುವುದು ಎಂದು ಹೇಳಿದರು.

ಪಟಾಕಿ ಸಿಡಿಸುವುದು ನಿಷಿದ್ಧ
ಮೆರವಣಿಗೆ ವೇಳೆ ಸಿಡಿಮದ್ದು ಹಾಗೂ ಪಟಾಕಿಗಳನ್ನು ಸಿಡಿಸುವುದು, ಧ್ವನಿವರ್ಧಕಗಳನ್ನು ಬಳಸುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ನಿಗದಿಪಡಿಸಿದ ಸ್ಥಳದಲ್ಲೇ ಗಣೇಶ ವಿಗ್ರಹಗಳನ್ನು ವಿಸರ್ಜಿಸಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ.
ಕೆರೆಯಲ್ಲಿ ವಿಸರ್ಜನೆ ಮಾಡಲು ಆಗದ ಸಾರ್ವಜನಿಕರು ಆಯಾ ಬಡಾವಣೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಬಿಬಿಎಂಪಿಯ 160 ವಾಯುಮಾಲಿನ್ಯ ನಿಯಂತ್ರಣಾ ಮಂಡಳಿಯ 14 ಸ್ಥಳಗಳಲ್ಲಿ ಸಂಚಾರಿ ವಿಸರ್ಜನಾ ಘಟಕಗಳ ಟ್ಯಾಂಕ್‌ಗಳಲ್ಲಿ ವಿಸರ್ಜಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ವಿಸರ್ಜನಾ ವೇಳೆ ಸಂಗ್ರಹವಾಗುವ ಹೂವು, ಬಾಳೆಕಂದು, ತಳಿರು ತೋರಣಗಳನ್ನು ಆಗ್ಗಿಂದ್ದಾಗ್ಗೆ ನಿಗದಿತ ಲಾರಿಗಳಲ್ಲಿ ತುಂಬಿಸಿ ಹೊರಸಾಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Comment