ಗಡ್ಡಧಾರಿಗಳಿಗೊಂದು ಕ್ಲಬ್

ಗಡ್ಡ, ಗಡ್ಡಪ್ಪ ಅಂದ್ರೆ ತಕ್ಷಣ ನೆನಪಾಗುವುದು ತಿಥಿ ಚಿತ್ರದ ಪ್ರಮುಖ ಪಾತ್ರಧಾರಿ ಚನ್ನೇಗೌಡ. ಈಗಂತೂ ಗಡ್ಡಪ್ಪ ಅಂತಲೇ ಜನಪ್ರಿಯ. ಈ ವಿಷಯ ಪ್ರಸ್ತಾಪ ಮಾಡುವುದರ ಹಿಂದೆ ಒಂದು ಸಂಗತಿ ಇದೆ. ಗಡ್ಡ ಅಂದರೆ ಮೂಗು ಮುರಿಯುವವರೇ ಹೆಚ್ಚು. ಬಹಳಷ್ಟು ಮಹಿಳೆಯರಂತೂ ಗಡ್ಡದ ಬಗ್ಗೆ ಅವಹೇಳನ ಮಾಡುವುದೇ ಹೆಚ್ಚು.

ಈಗಂತೂ ಗಡ್ಡ ಬೇಕಾಬಿಟ್ಟಿ ಬಿಡುವಂತಿಲ್ಲ ಬಯ್ಯುವವರ ಮುಂದೆ ಅಪಹಾಸ್ಯಕ್ಕೆ ಈಡಾಗಬಾರದು ಅಂತಲೇ ಗಡ್ಡ ಪ್ರಿಯರು ’ಟ್ರಿಮ್ ಮಾಡಿಸುವ ದಾರಿ ಹಿಡಿದಿದ್ದಾರೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಗಡ್ಡದ ಬಗ್ಗೆ ಇರುವ ಕೀಳರಿಮೆ ಹೋಗಲಾಡಿಸಲು ಬೆಂಗಳೂರು ನಗರದಲ್ಲಿ ಬಿಯರ್ಡ್ ಕ್ಲಬ್ ಸ್ಥಾಪನೆಯಾಗಿದೆ. ಇದರ ಸಂಸ್ಥಾಪಕ ವಿಶಾಲ್ ಸಿಂಗ್.

ಈತನಿಗೆ ಗಡ್ಡ ಅಂದರೆ ಪಂಚಪ್ರಾಣವಂತೆ. ಗಡ್ಡದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳನ್ನು ಎದುರಿಸುವುದಕ್ಕಾಗಿಯೇ ಗಡ್ಡಧಾರಿಗಳನ್ನು ಒಳಗೊಂಡ ಕ್ಲಬ್ ಅನ್ನು ಸ್ಥಾಪಿಸಲಾಗಿದೆ ಎನ್ನೋದು ಅವನ ವಾದ.

ಈಗಂತೂ ಗಡ್ಡಧಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಕ್ಲಬ್ ಸದಸ್ಯರಾಗಿದ್ದಾರೆ. ಯಾವ್ಯಾವುದಕ್ಕೋ ಸಂಘಗಳಾಗಿವೆ. ಅಂತಾ ಗಡ್ಡವನ್ನು ಠೀವಿಯಿಂದ ನೇವರಿಸಿಕೊಂಡು ಹೆಮ್ಮೆಪಡುತ್ತಾರೆ.

ಗಡ್ಡಧಾರಿಗಳ ಬಗ್ಗೆ ಸಹಜವಾಗಿ ಸಮಾಜದಲ್ಲಿ ಒಳ್ಳೆ ಅಭಿಪ್ರಾಯವಲ್ಲ, ಗಡ್ಡ ಬಿಟ್ಟಿರುವವರು ಖಳನಾಯಕರಂತೆ ಕಾಣುತ್ತಾರೆ. ಅವರ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ಗಡ್ಡಧಾರಿಗಳೆಂದರೆ ಸಿಕ್ಕಾಪಟ್ಟೆ ಬುದ್ಧಿಜೀವಿಗಳು ಎಂದು ಕೆಲವರು ಅಂದುಕೊಂಡಿದ್ದರೆ, ಇನ್ನೂ ಕೆಲವರು ಅವರು ಗಾಂಜಾ ಹುಕ್ಕಾ ಸೇದುವವರು ಅವರು ಒಳ್ಳೆಯವರಲ್ಲ ಎಂದು ಭಾವಿಸುವವರೇ ಹೆಚ್ಚು.

ಬಿಯರ್ಡ್ ಕ್ಲಬ್ ಒಂದು ಸದುದ್ದೇಶದಿಂದ ಆರಂಭವಾಗಿದೆ. ಗಡ್ಡಧಾರಿಗಳು ಕೆಟ್ಟವರಲ್ಲ. ಅವರೂ ಮನುಷ್ಯರೇ, ಸಮಾಜದಲ್ಲಿ ಜವಾಬ್ದಾರಿಯುತ ಮನುಷ್ಯರೇ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಕೆಲಸದಲ್ಲಿ ನಿರತವಾಗಿದೆ.

ಗಡ್ಡ ಬಿಟ್ಟು ಬಂದವರಿಗೆ ಕಂಪನಿ ಮಾಲೀಕರು ಕೆಲಸ ಕೊಡಲೂ ಹಿಂಜರಿಯುವುದು ಉಂಟು. ಆತನ ದಾರಿ ಕಂಡು ಕೆಲವರು ಬೆದರಿದರೆ ಮತ್ತೆ ಕೆಲವರು ಅವನೊಂದಿಗೆ ಮಾತನಾಡಲೂ ಇಷ್ಟಪಡುವುದಿಲ್ಲ, ಲಕ್ಷಣವಾಗಿ ಶೇವ್ ಮಾಡಿಕೊಂಡು ಚಾಕೋಲೇಟ್ ಹುಡುಗನ ತರ ಬರಬಾರದೆ ಎಂದು ಗೇಲಿ ಮಾಡುತ್ತಾರೆ.

ಆದರೆ ಈಚಿನ ದಿನಗಳಲ್ಲಿ ಗಡ್ಡ ಬಿಡುವುದು ಒಂದು ಫ್ಯಾಷನ್ ಆಗಿದೆ. ತರಹೇವಾರಿ ಗಡ್ಡಧಾರಿಗಳನ್ನು ನಮ್ಮ ಸುತ್ತಮುತ್ತಲು ಕಾಣಬಹುದು. ಗಡ್ಡವನ್ನು ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಿ ಹುಡುಗಿಯರನ್ನು ಆಕರ್ಶಿಸುವ ಬಗ್ಗೆಯೇ ಈಗಿನ ಕಾಲದ ಹುಡುಗರು ಯೋಚಿಸುವುದೂ ಉಂಟು.

ನೋಡೇ ಸನ್ಯಾಸಿ ಬಂದ ಅಂತ ಗಡ್ಡಧಾರಿಗಳನ್ನು ಕಂಡು ಗೋಳು ಹುಯ್ದುಕೊಳ್ಳುವವರ ಸಂಖ್ಯೆ ಕಡಿಮೆ ಏನಿಲ್ಲ. ಎಲ್ಲಾ ಸಮುದಾಯಗಳ ಜನರನ್ನು ಒಗ್ಗೂಡಿಸುವುದು. ಗಡ್ಡದ ಬಗ್ಗೆ ಅರಿವು ಮೂಡಿಸುವುದು ಈ ಕ್ಲಬ್‌ನ ಮುಖ್ಯ ಉದ್ದೇಶ.

Leave a Comment