ಗಡಿಭಾಗದ ಹಳ್ಳಿಗಳ  ಮನೆ ಮನೆಯಲ್ಲಿ ಅಕ್ರಮ ಮದ್ಯ

ಬಳ್ಳಾರಿ, ಮೇ.23: ನೆರೆಯ ಆಂಧ್ರ ಪ್ರದೇಶ ಜನರಿಗಾಗಿ ತಾಲೂಕಿನ ಗಡಿಭಾಗದ ಹಳ್ಳಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆರಂಭಗೊಂಡಿದ್ದು ಇದರ ನಿಯಂತ್ರಣಕ್ಕೆ ಆಂಧ್ರದ ಪೊಲೀಸರೇ ದಾಳಿ ಮಾಡಿ ಪತ್ತೆ ಹಚ್ಚುವ ಕಾರ್ಯ ನಡೆದಿದೆ.

ನಿನ್ನೆ ದಿನ ಪಿ.ಡಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋಳದರಾಶಿ, ರೂಪನಗುಡಿ ಮೊದಲಾದ ಹಳ್ಳಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮದ್ಯವನ್ನು ಆಂಧ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದನ್ನು ಕಂಡು ನಮ್ಮ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ರೂಪನಗುಡಿಯ ಮನೆಯೊಂದರಲ್ಲಿ ಬಾಕ್ಸ್, ಬಾಕ್ಸ್ ವಿವಿಧ ಬ್ರಾಂಡಿನ ಮದ್ಯವನ್ನು ವಶಪಡಿಸಿಕೊಂಡಿರುವ ವೀಡಿಯೋ ಈಗ ವೈರಲ್ ಆಗಿದೆ, ಪ್ರಭಾವಿ ಮುಖಂಡರ ಆಪ್ತರ ಮನೆಗಳಲ್ಲಿ ಈ ರೀತಿ ಅಕ್ರಮ ಮದ್ಯ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಆಂಧ್ರ ಪ್ರದೇಶಕ್ಕೆ ಸಾಗಿಸಲಾಗುತ್ತಿದೆಯಂತೆ

ಆಂಧ್ರ ಪ್ರದೇಶದಲ್ಲಿ ಮದ್ಯದ ಬೆಲೆಯನ್ನು ಶೇ.75ರಷ್ಟು ಹೆಚ್ಚು ಮಾಡಿರುವುದರಿಂದ ಈ ಕಳ್ಳ ದಂಧೆ ಹೆಚ್ಚಾಗಿದೆ.

ಆಂಧ್ರದವರು ಗಡಿದಾಟಿಕೊಂಡು ಬಂದು ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡುತ್ತಿದೆಂದು ಗಡಿಭಾಗದ ಮದ್ಯದ ಅಂಗಡಿಯನ್ನು ಶಾಸಕ ನಾಗೇಂದ್ರ ಅವರು ಬಂದ್ ಮಾಡಿಸಿದರು.

ಇದನ್ನೇ ಬಂಡವಾಳವಾಗಿಸಿಕೊಂಡ ಅಕ್ರಮ ದಂಧೆ ಕೋರರು. ಮದ್ಯವನ್ನು ಪ್ರಭಾವಿಗಳ ಮತ್ತು ಸ್ಥಳೀಯ ಪೊಲೀಸರ ಸಹಕಾರದಿಂದಲೇ ಆಂಧ್ರ ಪ್ರದೇಶಕ್ಕೆ ಸಾಗಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಕರ್ನಾಟಕದಿಂದ ಅಕ್ರಮ ಮದ್ಯ ಹರಿದು ಬರುತ್ತಿರುವುದರಿಂದ ತಮ್ಮ ರಾಜ್ಯದ ಆದಾಯಕ್ಕೆ ಬೀಳುತ್ತಿರುವ ಖೋತಾದಿಂದ ಬೇಸತ್ತ ಅಲ್ಲಿನ ಪೊಲೀಸರು ನಮ್ಮ ಗಡಿಭಾಗದ ಹಳ್ಳಿಗಳಲ್ಲಿನ ಮನೆಗಳನ್ನು ಲಾಜಾಡಿ ಅಕ್ರಮ ಮದ್ಯ ಸಂಗ್ರಹ ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾರೆ.

Leave a Comment