ಗಜಪಡೆ ತಾಲೀಮು ಶುರು

ಮೈಸೂರು, ಸೆ. 7. ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ, ಗಜಪಡೆಯ ತಾಲೀಮು ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ.
ಬೆಳಿಗ್ಗೆ 7.30ಕ್ಕೆ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಹೊರಟಿತು. ಮುಖ್ಯ ರಸ್ತೆಗಳಾದ ಕೆ.ಆರ್. ವೃತ್ತ, ಆಯುರ್ವೇದ ವೃತ್ತ, ಸಯ್ಯಾಜಿರಾವ್ ರಸ್ತೆ, ಬೊಂಬು ಬಜಾರ್, ಹೈವೇ ವೃತ್ತದ ಮೂಲಕ ಸಾಗಿ, ಮರಳಿ ಅರಮನೆಗೆ ಬಂದು ಸೇರಿತು.
ಕಾಡಿನಲ್ಲಿ ಸುಮಾತು ಹತ್ತೂವರೆ ತಿಂಗಳ ಕಾಲ ಸ್ವಚ್ಛಂದವಾಗಿ ವಿಹರಿಸಿದ್ದ ಆನೆಗಳ ತಂಡವನ್ನು ನಾಡಿನ ವಾತಾವರಣಕ್ಕೆ ಒಗ್ಗಿಸುವುದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಂದು ಸವಾಲಾಗಿ ಪರಿಣಮಿಸಿದೆ.
ಮೈಸೂರು ಮಹಾನಗರದ ಮುಖ್ಯ ರಸ್ತೆಯಲ್ಲಿ ವಾಹನಗಳ ಕಿರಿಕರಿಯೊಂದಿಗೆ, ಶಬ್ಧಮಾಲಿನ್ಯದೊಂದಿಗೆ, ಭಾರೀ ಜನಜಂಗುಳಿಯೊಂದಿಗೆ ದಸರಾ ಆನೆಗಳನ್ನು ಕಾಲ್ನಡಿಗೆಯಲ್ಲಿ ಕೊಂಡೊಯ್ಯುವ ಮೂಲಕ ಅವುಗಳಿಗೆ ಈ ಎಲ್ಲದರ ಪರಿಚಯ ಮಾಡಿಸುವ ಪ್ರಯತ್ನಕ್ಕೆ ಚಾಲನೆ ಕೊಡಲಾಗಿದೆ.
ಮೊದಲ ತಂಡದಲ್ಲಿ ಮೈಸೂರಿಗೆ ಬಂದಿರುವ ಧನಂಜಯ ಇದೇ ಮೊದಲ ಬಾರಿ ನಾಡಿಗೆ ಬಂದಿದ್ದಾನೆ. ಆತನ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಏಕೆಂದರೆ, ಆತನಿಗೆ ನಾಡಿನ ವಾತಾವರಣ ಸಂಪೂರ್ಣ ಹೊಸದಾಗಿದೆ. ವಿಶೇಷವಾಗಿ, ಆತನಿಗೆ ಜನಸ್ತೋಮ, ವಾಹನಗಳ ಓಡಾಟ, ಶಬ್ಧ ಮೊದಲಾದವುಗಳನ್ನು ಪರಿಚಯಿಸಿ, ಅದಕ್ಕೆ ಆತನ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತೀಕ್ಷಣವಾಗಿ ಗಮನಿಸಲಾಗುತ್ತಿದೆ.
ಜಂಬೂಸವಾರಿ ದಿನ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳು ಅಂದು ರಸ್ತೆಯ ಇಕ್ಕೆಲಗಳಲ್ಲಿ ನೆರೆಯುವ ಭಾರಿ ಜನಸ್ತೋಮ, ಶಬ್ಧ ಮಾಲಿನ್ಯಕ್ಕೆ ಹೆದರಬಾರದೆಂಬ ಕಾರಣಕ್ಕೆ ಸುಮಾರು ಒಂದೂವರೆ ತಿಂಗಳ ಕಾಲ ಈ ತಾಲೀಮು ನಡೆಯಲಿದೆ.

Leave a Comment