ಗಂಡಾಗಲಿ, ಹೆಣ್ಣಾಗಲಿ ಮಗುವನ್ನು ಸಮಾನತೆಯಿಂದ ಬೆಳೆಸಿ

ದಾವಣಗೆರೆ, ಆ.3: ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ತಾರತಮ್ಮ ನೀತಿ ಅನುಸರಿಸುವುದು ಸರಿಯಲ್ಲವೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೂ ಆದ ಕೆಂಗಬಾಲಯ್ಯನವರು ನುಡಿದರು.
ಅವರು ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಏರ್ಪಡಿಸಿದ್ದ 214ನೇ ಶಿವಾನುಭವ ಸಂಪದ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಭ್ರೂಣಹತ್ಯೆ ಮಹಾ ಪಾಪ ಎಂಬ ಸತ್ಯ ಮಹಿಳೆಗೆ ಗೊತ್ತಿದ್ದರೂ ಸಹ ಮಹಿಳೆಯರು ಅದನ್ನು ಅನುಸರಿಸುವುದು ಸರಿಅಲ್ಲವೆಂದರು. ಹೆಣ್ಣು ಹುಟ್ಟಿದರೆ ಸರ್ಕಾರ ಪ್ರೋತ್ಸಾಹ ಹಣದ ಜೊತೆಗೆ ಅವಳ ಮದುವೆಯ ವಯಸ್ಸಿಗೆ ಅನುಕೂಲವಾಗಲಿ ಎಂದು ತಾಯಿ ಕಾರ್ಡ್ ಮೂಲಕ ಜೀವವಿಮೆಯಂಥಹ ಸೌಲಭ್ಯ ನೀಡುತ್ತಿದೆ ಆದರೂ ಮಹಿಳೆಯರು ಈ ಬಗ್ಗೆ ತಾತ್ಸಾರ ಅನುಸರಿಸುವುದು ಸರಿಯಲ್ಲವೆಂದರು.
ಒಂದು ಹೆಣ್ಣು ಹುಟ್ಟಿದರೆ ಎರಡು ಮನೆ ಬೆಳಗುತ್ತಾಳೆ, ಗಂಡು ಹುಟ್ಟಿದಾಗ ಸಂತೋಷಪಡುವ ತಾಯಿ ಹೆಣ್ಣು ಹುಟ್ಟಿದರೆ ಸಮಾಜಕ್ಕೆ ಹುಣ್ಣು ಎನ್ನುವ ಭಾವನೆ ಸರಿಯಲ್ಲ, ಮಗು ತಾಯಿಯ ಹೊಟ್ಟೆಯಲ್ಲಿರುವ 3ನೇ ತಿಂಗಳಿಗೆ ಕಾನೂನು ಪಾಲನೆ ಅನ್ವಯಿಸುತ್ತದೆ, ಗರ್ಭದಲ್ಲಿರುವ ಶಿಶುವನ್ನು ಪತ್ತೆ ಹಚ್ಚುವ ವೈದ್ಯರೂ ಶಿಕ್ಷೆ ಇದೆ ಎಂದ ಅವರು, “ಗಂಡುಮಗುವನ್ನು ಸಾಕುವ ಸಾಮಥ್ರ್ಯ ಇರುವ ಮಹಿಳೆಯರು ಹೆಣ್ಣು ಮಗುವಾದರೆ ಭ್ರೂಣಹತ್ಯೆಗೆ ನೂಕುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಗಂಡಾಗಲಿ, ಹೆಣ್ಣಾಗಲಿ ಮಗುವನ್ನು ಸಮಾನತೆಯಿಂದ ಬೆಳೆಸಿ, ಒಳ್ಳೆಯ ಶಾಲೆಗೆ ಸೇರಿಸಿ ಸಂಸ್ಕಾರವಂತರನ್ನಾಗಿ ಮಾಡಿ, ಅತ್ತೆ-ಮಾವರಿಗೆ ಗೌರವ ಕೊಡಿ, ಮುಂದೊಂದು ದಿನ ನಾವೂ ಅವರಂತೆ ಆಗುತ್ತೇವೆ ಎಂಬ ಭಾವನೆಯನ್ನು ಮೈಗೂಡಿಸಿಕೊಳ್ಳಿ ಎಂದರು. ಕೊಟ್ಟ ಮಗು ಚೆನ್ನಾಗಿರಬೇಕು ಎನ್ನುವ ಮಹಿಳೆಯರು ಬರುವ ಹೆಣ್ಣು ಮಗಳನ್ನು ಏಕೆ ಸಂಶಯದಿಂದ ನೋಡುತ್ತೀರಿ ಎಂದು ಪ್ರಶ್ನಿಸಿ, ಬೆಳೆಯುವ ಯುಗದಲ್ಲಿ ಕೂಡಿ ಬಾಳುವ ಸಂಸಾರಗಳು ವಿರಳವಾಗುತ್ತಿವೆ, ವಿದ್ಯಾಭ್ಯಾಸದ ಜ್ಞನಾರ್ಜನೆ ನೀಡುವುದರ ಜೊತೆಗೆ ಬದುಕುವ ಜೀವನವನ್ನು ಪೋಷಕರು ಕಲಿಸಿಕೊಡಬೇಕು. ಹಿರಿಯರು ಮನೆಯಲ್ಲಿದ್ದರೆ ಅದು ಕುಟುಂಬದ ಆಸ್ತಿ ಇದ್ದಂತೆ, ಅವರ ಮಾರ್ಗದರ್ಶನದಲ್ಲಿ ನಡೆದರೆ ಕುಟುಂಬಗಳೂ ಚೆನ್ನಾಗಿರುತ್ತವೆಂದು ನುಡಿದು ಸಮಾಜದಲ್ಲಿ ವೃದ್ಧಾಶ್ರಮಗಳು ಬೆಳೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀ ಅನ್ನದಾನೀಶ್ವರ ಸಂಸ್ಥಾನ ಮಠದ ನಿಯೋಜಿತ ಗುರುಗಳಾದ ಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.ಶಿವಯೋಗ ಮಂದಿರದ ಶ್ರೀ ಸದಾಶಿವ ಸ್ವಾಮಿಗಳವರು, ದಿ. ಲಕ್ಷ್ಮಣಪ್ಪ ಜೀವೆಣ್ಣನವರ ಜ್ಞಾಪಕಾರ್ಥವಾಗಿ ಭಕ್ತಿ ಸೇವೆ ವಹಿಸಿಕೊಂಡಿದ್ದ ಅವರ ಧರ್ಮಪತ್ನಿ ಶ್ರೀಮತಿ ತನ್ನಮ್ಮ, ಸುಪುತ್ರ ಎಲ್. ಶಿವಾನಂದ, ಸಂಸ್ಥೆಯ ಕಾರ್ಯದರ್ಶಿ ಎನ್. ಅಡಿವೆಪ್ಪ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀ ಗುರು ಪಂಚಾಕ್ಷರಿ ಸಂಗೀತ ವಿದ್ಯಾಲಯದ ಟಿ.ಹೆಚ್.ಎಂ. ಶಿವಕುಮಾರಸ್ವಾಮಿ ಮತ್ತು ಸಂಗಡಿಗರಾದ ನಯನ ಜಿ.ಪಿ. ಶಭನಮ್, ರೋಹಿಣ ಮತ್ತು ಸಂಗಡಿಗರಿಂದ ಪ್ರಾರ್ಥನೆ, ನಂತರ ಶಿಕ್ಷಕ ಮಹಾರುದ್ರಪ್ಪ ಮೆಣಸಿಕಾಯಿ ಸ್ವಾಗತಿಸಿದರು. ಇಂದಿನಸುದ್ಧಿ ಸಂಪಾದಕ ವೀರಪ್ಪ ಎಂ. ಭಾವಿ ಕಾರ್ಯಕ್ರಮ ನಿರೂಪಿಸಿ ಅಂತ್ಯದಲ್ಲಿ ವಂದಿಸಿದರು.

Leave a Comment