ಗಂಗೂಬಾಯಿ ಸಂಗೀತ ವಿವಿಗೆ ಅರ್ಹರ ನೇಮಕಕ್ಕೆ ಆಗ್ರಹ (ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಫೆ. ೧೧- ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಪ್ರದರ್ಶನ ಕಲೆಯ ವಿಷಯ ತಜ್ಞರನ್ನು ನೇಮಕಾತಿ ಮಾಡಬೇಕೆಂದು ಅಖಿಲ ಕರ್ನಾಟಕ ರಂಗ ಶಿಕ್ಷಣ ಪದವೀಧರರ ಒಕ್ಕೂಟ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗೆ ನೂತನ ಕುಲಪತಿಯನ್ನು ನೇಮಕಾತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ಬಾರಿ ಆಂಗ್ಲ ಭಾಷೆಯ ಪ್ರಾಧ್ಯಾಪಕರನ್ನು ಸರ್ಕಾರ ನೇಮಕಾತಿ ಮಾಡಲು ಹೊರಟಿರುವುದು ಸರಿಯಲ್ಲ. ಈ ವಿವಿಗೆ ಪ್ರದರ್ಶಕ ಕಲೆಗಳ ಅಗತ್ಯತೆಗಳನ್ನು ಅರಿಯುವ ಸಾಮರ್ಥ್ಯವಿರುವ ವಿಷಯ ತಜ್ಞರುಗಳ ನೇಮಕ ಸೂಕ್ತವಾಗಿದೆ. ಬೇರೆ ವಿಷಯಗಳ ಪರಿಣತರನ್ನು ಕುಲಪತಿಯನ್ನಾಗಿ ನೇಮಕ ಮಾಡಿದರೇ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಒಕ್ಕೂಟದ ನಾಗರಾಜ ಮೂರ್ತಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಬೇರೆ ಬೇರೆ ವಿಷಯದ ಪ್ರಾಧ್ಯಾಪಕರುಗಳು ಕುಲಪತಿಗಳಾಗುವ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಸಿರಬಹುದು. ಆದರೆ ಅವರಿಗೆ ರಾಜ್ಯದ ಇತರೆ ವಿವಿಗಳಲ್ಲೂ ಕುಲಪತಿ ಮತ್ತು ಕುಲಸಚಿವರಾಗುವ ಅವಕಾಶವಿದೆ. ಆದರೆ ಇಂತಹ ಅವಕಾಶ ಪ್ರದರ್ಶನ ಕಲೆ ವಿಷಯದ ಪ್ರಾಧ್ಯಾಕರುಗಳಿಗೆ ಇರುವುದು ತೀರಾ ಕಡಿಮೆ. ಹಾಗಾಗಿ ರಾಜ್ಯ ಸರ್ಕಾರ ಪ್ರದರ್ಶನ ಕಲಾ ವಿಷಯದ ಪ್ರಾಧ್ಯಾಪಕರುಗಳನ್ನೇ ಕುಲಪತಿಯನ್ನಾಗಿ ನೇಮಕಾತಿ ಮಾಡಬೇಕೆಂದು ಒಕ್ಕೂಟದ ವತಿಯಿಂದ ಒತ್ತಾಯಿಸಲಾಗುವುದು. ಸುದ್ದಿ ಗೋಷ್ಠಿಯಲ್ಲಿ ಜನಾರ್ಧನ್, ಪ್ರಭು, ಜಗದೀಶ್ ಹಾಜರಿದ್ದರು.

Leave a Comment