ಖ್ಯಾತ ಚಿತ್ರ ಸಾಹಿತಿ ಚಿ. ಉದಯಶಂಕರ್ ಪತ್ನಿ ವಿಧಿವಶ

ಬೆಂಗಳೂರು, ಏ 16 – ಕನ್ನಡ ಚಿತ್ರರಂಗದ ಮಹಾನ್ ಚಿತ್ರ ಸಾಹಿತಿ ದಿವಂಗತ ಚಿ. ಉದಯಶಂಕರ್ ಅವರ ಪತ್ನಿ ಶಾರದಮ್ಮ (74) ಇಂದು ಬೆಳ್ಳಿಗ್ಗೆ ವಿಧಿವಶರಾಗಿದ್ದಾರೆ.

ಬೆಂಗಳೂರಿನ ಯಶವಂತಪುರದ ಇಸ್ಕಾನ್ ದೇವಸ್ಥಾನ ಸಮೀಪದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಮಗ ಚಿ. ಗುರುದತ್ ಅವರೊಂದಿಗೆ ವಾಸಿಸುತ್ತಿದ್ದ ಅವರು. ನಸುಕಿನ 3.30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಶಾರದಮ್ಮ ಅವರಿಗೆ ಚಿತ್ರನಟ, ನಿರ್ದೇಶಕ ಚಿ. ಗುರುದತ್ ಸೇರಿದಂತೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಮಧ್ಯಾಹ್ನ ಹರಿಶ್ಚಂದ್ರ ಘಾಟ್‌ನಲ್ಲಿ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಮಗಳು ಶ್ಯಾಮಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಲಾಕ್‌ಡೌನ್ ಕಾರಣದಿಂದ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿಯೇ ಶಾರದಮ್ಮ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ

ಶಾರದಮ್ಮ ಮತ್ತು ಚಿ. ಉದಯಶಂಕರ್ ಅವರ ವಿವಾಹ 1964ರ ಜೂನ್ 5ರಂದು ನಡೆದಿತ್ತು. ತಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಂಭಾಷಣೆಗಳಿಂದ ಮನೆ ಮಾತಾಗಿದ್ದ ಉದಯಶಂಕರ್ ಅವರು 1993ರಲ್ಲಿಯೇ ಮೃತಪಟ್ಟಿದ್ದರು. ಅವರ ಹಿರಿಯ ಮಗ ರವಿಶಂಕರ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.

Leave a Comment