ಖುಷಿ ಖುಷಿಯಲಿ…

ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಬಳಿ ನಟಿಸುವ ಅವಕಾಶ ಕೇಳಿಕೊಂಡು ಹೋದಾಗ, ಸಪೂರವಾಗಿ ಅಂದವಾಗಿದ್ದ ಈ ಹುಡುಗಿಗೆ ತಮ್ಮ ಮಗ ನಿರ್ದೇಶಿಸುತ್ತಿದ್ದ ಹಿಂಗ್ಯಾಕೆ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಹೀಗೆ ಸಿನೆಮಾ ನಟಿಯಾದ ಖುಷಿ ಮೂಲತಃ ರಂಗಭೂಮಿಯಿಂದ ಬಂದಿರುವ ಪ್ರತಿಭಾವಂತೆ. ಎಂಟನೇ ಕ್ಲಾಸಿನಿಂದಲೇ ನಾಟಕದಲ್ಲಿ ತೊಡಗಿಸಿಕೊಂಡು ರೆಡ್ ಥಿಯೇಟರ್, ರಂಗಶಂಕರ, ಬಿ. ಜಯಶ್ರೀ ತಂಡದ ಜೊತೆ ನಾಟಕಗಳಲ್ಲಿ ಆಭಿನಯಿಸಿದ್ದಾರೆ. ಮೊದಲ ಚಿತ್ರದಲ್ಲಿ ಪುಟ್ಟ ಪಾತ್ರವಿತ್ತು ಅಲ್ಲಿಂದ ಆಗಿದ್ದು ಸೋಡಾಬುಡ್ಡಿ ಚಿತ್ರದ ಎರಡನೇ ಹೀರೋಯಿನ್.

ಸೋಡಾಬುಡ್ಡಿ ಚಿತ್ರ ತೆರೆಕಂಡು ಸುಮಾರು ಎರಡು ವರ್ಷಗಳ ನಂತರ ಇತ್ತೀಚೆಗೆ ನಡೆದ ನಿರ್ದೇಶಕ ಅರಸು ಅಂತಾರೆ ಹೊಸ ಚಿತ್ರ ಸೆಕೆಂಡು ಬಕೇಟು ಬಾಲ್ಕಾನಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು ಖುಷಿ. ಇದರಲ್ಲಿ ತನ್ನ ಮೂಲ ಊರಾದ ಮದ್ದೂರಿನ ಕಡೆಯ ಹಳ್ಳಿ ಹುಡುಗಿಯಾಗಿ ನಟಿಸುತ್ತಿರುವ ರೋಮಾಂಚನದಲ್ಲಿದ್ದರು. ಜೊತೆಗೆ ಈ ಚಿತ್ರದಲ್ಲಿ ಹಿಂದಿನ ಚಿತ್ರಗಳ ಶೈಲಿಯಲ್ಲಿ ಹಾಡೊಂದನ್ನು ಚಿತ್ರೀಕರಿಸಲಾಗುತ್ತಿದೆ ಎನ್ನುವ ದುಪ್ಪಟ್ಟು ಖುಷಿ ಇತ್ತು.

ಮಂಡ್ಯ ಕಡೆ ಚಿತ್ರಮಂದಿರಗಳ ಮುಂದೆ ಬ್ಲಾಕ್‌ನಲ್ಲಿ ಟಿಕೇಟ್ ಮಾರುವಾಗ ಸೆಕೆಂಡು ಬಕೇಟು ಬಾಲ್ಕಾನಿ ಎಂದು ಕೇಳುತ್ತಾರಂತೆ. ಅದನ್ನೇ ಚಿತ್ರಕ್ಕೆ ಹೆಸರು ಇಡಲಾಗಿದೆಯಂತೆ. ಬಕೇಟ್ ಸಿನೆಮಾ ಸಿಗುವವರೆಗೆ ಖುಷಿ ಖಾಲಿ ಕುಳಿತಿರಲಿಲ್ಲ. ಅವರು ಕನಸಿನ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ೬-೫ =೨ ಚಿತ್ರದಿಂದ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ ಅಶೋಕ್ ಅವರ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದು ಅವರ ಕನಸಿನ ಚಿತ್ರ ಯಾಕೆಂದರೆ ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಚಿತ್ರವನ್ನು ಅಶೋಕ್ ಅದೆಷ್ಟು ಶ್ರದ್ಧೆಯಿಂದ ಹೆಣೆಯುತ್ತಿದ್ದಾರೆಂದರೆ ಚಿತ್ರದಲ್ಲಿ ಬರುವ ಋತು ಬದಲಾವಣೆಗೆ ಅದೇ ಋತುವಿಗಾಗಿ ಕಾದು ಚಿತ್ರಿಸುತ್ತಿದ್ದಾರೆ. ಭಿನ್ನವಾದ ಚಿತ್ರಕಥೆ ಮತ್ತು ನಿರೂಪಣೆ ಇದೆಯಂತೆ. ಇನ್ನೂ ೩೦ದಿನಗಳ ಚಿತ್ರೀಕರಣ ಆದರೆ ಚಿತ್ರ ಪೂರ್ತಿಯಾಗುತ್ತದೆಯಂತೆ.

ಅಲ್ಲಿಗೆ ಸುಮಾರು ಒಂದೂವರೆ ವರ್ಷಗಳಿಂದ ಈ ಚಿತ್ರದಲ್ಲಿ ನಟಿಸುತ್ತಿರುವ ಖುಷಿ ತಾಳ್ಮೆಯನ್ನು ಮೆಚ್ಚಲೇಬೇಕು. ಅಶೋಕ್ ತಂಡ ತುಂಬಾನೇ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದಾಗ ಹಿಂದಿಯ ಖ್ಯಾತ ನಟ ಅಮೀರ್ ಖಾನ್ ಅವರ ದಂಗಲ್ ಚಿತ್ರದಲ್ಲಿರುವ ನಟಿಯಷ್ಟೇ ಹೆಸರು ಮಾಡುತ್ತೀರ ಎಂದು ಅಶೋಕ್ ಖುಷಿಗೆ ಭವಿಷ್ಯ ನುಡಿದಿದ್ದಾರಂತೆ. ಲೆಕ್ಕಕ್ಕೇ ಸಿಗದಂತಹ ಹತ್ತು ಚಿತ್ರಗಳಿಗಿಂತ ಒಳ್ಳೆ ನಿರ್ದೇಶಕರ ಒಂದು ಉತ್ತಮ ಚಿತ್ರ ಬಹುದೊಡ್ಡ ಎತ್ತರಕ್ಕೆ ಕರೆದೊಯ್ಯುತ್ತದೆ ಎನ್ನುವ ನಂಬಿಕೆ ಖುಷಿಯದ್ದಾಗಿದೆ.
-ಕೆ.ಬಿ. ಪಂಕಜ

Leave a Comment