ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರವಾನಿಗೆ ನೀಡಿ ಲೂಟಿಗೆ ನಿಂತ ಸರ್ಕಾರ

ಬಳ್ಳಾರಿ, ಸೆ4 : ಯಾವ ಸರ್ಕಾರವೂ ಈ ತನಕ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸಿಲ್ಲ. ಅದರ ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಾಲಾಕಾಲೇಜು ತೆರೆಯಲು ಅನುಮತಿ ನೀಡಿ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಿವೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾಧ್ಯಕ್ಷ ಗೋವಿಂದ್ ಆರೋಪಿಸಿದ್ದಾರೆ.

ಅವರು ಇಂದು ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಶಿಕ್ಷಣ ವಿರೋಧಿ ನೀತಿಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರ್ಕಾರ ಶಿಕ್ಷಕರ ನೇಮಕಾತಿ ಮಾಡದೇ ಪಾಸ್-ಪೇಲ್ ಪದ್ದತಿಯನ್ನು ತೆಗೆದು ಹಾಕಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಸ್ಥಿತಿಗೆ ತಂದಿದೆ. ಅಷ್ಟೇ ಅಲ್ಲದೆ ಸಿಬಿಎಸ್ ಸಿ ಪದ್ದತಿ ಜಾರಿ‌ಮಾಡಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನೇ ನಶಿಸುವಂತೆ ಮಾಡಿದೆ . ಬುದ್ಧಿ ಜೀವಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇಂತಹ ಶಿಕ್ಷಣ ವಿರೋಧಿ ನೀತಿಗಳನ್ನು ವಿರೋಧಿಸಬೇಕೆಂದರು.

ಜಿಲ್ಲಾ ಉಪಾಧ್ಯಕ್ಷ ಜಗದೀಶ್ ನೇಮಕಲ್ ಮಾತನಾಡಿ, ನಮ್ಮ ಸರ್ಕಾರಗಳಿಗೆ ಜಿಲ್ಲೆ ಒಂದೂ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಹಲವಾರು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡುತ್ತಿರುವುದರಿಂದ ಡೊನೇಷನ್ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿವೆ. ಈಗಲಾದರೂ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಿ ಎಂದರು.

ವಿದ್ಯಾರ್ಥಿಗಳು ಈ ವೇಳೆ ಹಲವು ಶಿಕ್ಷಣ ವಿರೋಧಿ ದೋಷಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಎಐಡಿಎಸ್ ಒ ನ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್, ಜಂಟಿಕಾರ್ಯದರ್ಶಿ ರವಿಕಿರಣ್, ಜಿಲ್ಲಾ ಸಮಿತಿ ಸದಸ್ಯರಾದ ರಂಗಸ್ವಾಮಿ, ಗುರಳ್ಳಿರಾಜ, ಕುಮ್ಮರಿ ಈರಣ್ಣ, ಶೇಖರ್ ಹಾಗೂ ವಿವಿಧ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.

Leave a Comment