ಖಾಸಗಿ ಬಸ್‌ಗಳ ಸೇವೆ ಇನ್ನೂ ಅನಿಶ್ಚಿತ..!

ತುಮಕೂರು, ಮೇ ೨೯- ಹಳ್ಳಿ-ನಗರಗಳ ನಡುವೆ ಸಂಪರ್ಕ ಸೇತುವಾಗಿರುವ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡು ಎರಡು ತಿಂಗಳಾಗಿದ್ದು, ಮುಂದಿನ ದಿನಗಳಲ್ಲೂ ಸರ್ಕಾರ ಅಗತ್ಯ ಸಹಕಾರ ನೀಡಿದರಷ್ಟೇ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ. ಇಲ್ಲದಿದ್ದರೆ ಈ ಬಸ್‌ಗಳ ಸೇವೆ ಇನ್ನೂ ಅನಿಶ್ಚಿತವಾಗಿದೆ.

ಲಾಕ್‍ಡೌನ್ ಘೋಷಣೆಯಾದ ಮಾರ್ಚ್ 24 ರಿಂದ ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ಲಾಕ್‍ಡೌನ್ ಸಡಿಲಗೊಂಡು ಕೆಎಸ್‍ಆರ್‍ಟಿಸಿ ಬಸ್‍ಗಳು ಕೊರೊನಾ ಸೋಂಕು ತಡೆ ಕ್ರಮಗಳನ್ನು ಅನುಸರಿಸಿ ಸಂಚಾರ ಆರಂಭಿಸಿವೆ. ಆದರೆ ಖಾಸಗಿ ಬಸ್‍ಗಳು ಮಾತ್ರ ಸರ್ಕಾರದ ಈಗಿನ ನಿಯಮ ಪಾಲಿಸಿ ರಸ್ತೆಗಳಿದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಸೇವೆ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂಘ ಹೇಳಿದೆ.

ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಪಾಡಲು 30 ಜನರಿಗೆ ಮಾತ್ರ ಅವಕಾಶ ನೀಡಿವೆ. ಬಸ್ ಹತ್ತುವ ಪ್ರಯಾಣಿಕರು ಸ್ಯಾನಿಟೈಸರ್‍ನಲ್ಲಿ ಕೈ ತೊಳೆಯುವ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಬಸ್ ನಿಲ್ದಾಣ ಪ್ರವೇಶಿಸುವವರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಆದರೆ, ಖಾಸಗಿ ಬಸ್‍ಗಳಲ್ಲಿ ಇಂತಹ ಕ್ರಮ ತೆಗೆದುಕೊಳ್ಳುವುದು ಖರ್ಚಿನ ಬಾಬ್ತು ಹಾಗೂ ದುಬಾರಿ ಎಂದು ಬಸ್ ಮಾಲೀಕರು ಹೇಳಿದ್ದಾರೆ.

ಈ ಸಂಬಂಧ ತುಮಕೂರು ಜಿಲ್ಲೆ ಸೇರಿದಂತೆ 15 ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಲ್ಲಿಸಿದರು. ಆದರೆ, ಈ ಬಗ್ಗೆ ಸರ್ಕಾರದಿಂದ ಸ್ಪಷ್ಟ ಸ್ಪಂದನೆ ಸಿಕ್ಕಿಲ್ಲ.

ಹೀಗಾಗಿ, ಬಸ್ ಸೇವೆ ಆರಂಭಿಸುವ ಸಂಬಂಧ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಲು ವಿವಿಧ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಜೂನ್ 2 ರಂದು ತುಮಕೂರಿನಲ್ಲಿ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆದರೆ, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಹೊರತು ಬಸ್ ಸಂಚಾರ ಆರಂಭಿಸುವುದಿಲ್ಲ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಬಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ.

ಕೋವಿಡ್-19ನ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ದಿನ ಬಸ್‍ಗಳನ್ನು ಸ್ಯಾನಿಟೈಸರ್ ಮಾಡಬೇಕು. ಹೀಗೆ ಮಾಡಲು ಪ್ರತಿ ಬಸ್‍ಗೆ ಒಂದು ಸಾವಿರ ರೂ. ಖರ್ಚು ಬರುತ್ತದೆ. ಬಸ್ ಹತ್ತುವ ಪ್ರಯಾಣಿಕರು ಕೈ ತೊಳೆಯುವ ಸ್ಯಾನಿಟೈಸರ್ ಅನ್ನು ಸರ್ಕಾರ ಒದಗಿಸಬೇಕು. ಬಸ್ ನಿಲ್ದಾಣದ ಸೋಂಕು ತಡೆ ಕ್ರಮಗಳನ್ನು ಸರ್ಕಾರವೇ ನಿರ್ವಹಿಸಬೇಕು. ಈಗಿರುವ ಪ್ರಯಾಣ ದರದಲ್ಲಿ ಬಸ್‍ಗಳಲ್ಲಿ 30 ಪ್ರಯಾಣಿಕರನ್ನು ಸೀಮಿತಗೊಳಿಸಿದರೆ ಮಾಲೀಕರ ನಿರಂತರ ನಷ್ಟ ಅನುಭವಿಸಬೇಕಾಗುತ್ತದೆ.

ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬುದು ಸರಿ. ಹಳ್ಳಿಗಳಲ್ಲಿ ಪ್ರಯಾಣಿಕರು ಇವೆಲ್ಲವನ್ನೂ ಪಾಲಿಸುತ್ತಾರೆಯೆ? ಹೆಚ್ಚು ಜನ ಬಸ್ ಹತ್ತುವುದನ್ನು ಖಾಸಗಿ ಬಸ್ ಸಿಬ್ಬಂದಿ ನಿಯಂತ್ರಿಸಲು ಹೋದರೆ ಇನ್ನೊಂದು ಸಮಸ್ಯೆ ಶುರುವಾಗುತ್ತದೆ. ಹತ್ತಿಸಿಕೊಂಡರೆ, ಕೊವಿಡ್-19 ಮಾರ್ಗಸೂಚಿ ಉಲ್ಲಂಘನೆ ಮಾಡಿದಂತಾಗುತ್ತದೆ. ಜತೆಗೆ ಪೊಲೀಸರು ಬಸ್ ತಡೆದು ಕೇಸು ಹಾಕಲು ಶುರು ಮಾಡುತ್ತಾರೆ. ಇಂತಹ ಸಮಸ್ಯೆಗಳು ಎದುರಾದಾಗ ಯಾವ ರೀತಿ ನಿಭಾಯಿಸಬೇಕು ಎಂಬುದಕ್ಕೆ ಸರ್ಕಾರ ಸ್ಪಷ್ಟ ಸೂಚನೆ ಪ್ರಕಟಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಲಾಕ್‍ಡೌನ್ ಶುರುವಾದಾಗಿನಿಂದ ಬಸ್‍ಗಳು ನಿಂತು, ಮಾಲೀಕರಿಗೆ ವ್ಯವಹಾರವೇ ಇಲ್ಲದಂತಾಗಿ ನಷ್ಟ ಅನುಭವಿಸಿದ್ದಾರೆ. ಬಸ್ ಸಿಬ್ಬಂದಿ ಉದ್ಯೋಗ ರಹಿತರಾಗಿದ್ದಾರೆ. ಅಲ್ಲದೆ, ಬಸ್‍ಗಳ ಸಾಲದ ಕಂತು, ತೆರಿಗೆ ಕಟ್ಟಬೇಕಾಗಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್ ಓಡಿಸಲು ಸರ್ಕಾರದಿಂದ ಸೂಚನೆ ಬಂದಲ್ಲಿ ಸರ್ಕಾರ ಖಾಸಗಿ ಬಸ್ ಮಾಲೀಕರಿಗೆ ವಿವಿಧ ರೀತಿಯಲ್ಲಿ ನೆರವಾಗಬೇಕು. ಕೆ.ಎಂ.ವಿ.ಟಿ ಆಕ್ಟ್ ಪ್ರಕಾರ ಬಸ್‍ಗಳ ತ್ರೈಮಾಸಿಕ ತೆರಿಗೆಯನ್ನು ಸರ್ಕಾರ ಮುಂಗಡವಾಗಿ ಪಡೆಯುತ್ತದೆ.

ಇದರ ಪರಿಷ್ಕರಣೆಯಾಗಿ ಡಿಸೆಂಬರ್‍ವರೆಗೆ ತೆರಿಗೆ ಪಡೆಯಲು ವಿನಾಯಿತಿ ನೀಡಬೇಕು. ಡಿಸೆಂಬರ್ ನಂತರ ಶೇ. 50 ರಷ್ಟು ತೆರಿಗೆ ಪಡೆಯಲು ಅವಕಾಶ ಮಾಡಿಕೊಡಬೇಕು. ಬಸ್ ಸಿಬ್ಬಂದಿಯ ಸಂಬಳವನ್ನು ಸರ್ಕಾರದಿಂದ ಭರಿಸಬೇಕು. ಕೆಎಸ್‍ಆರ್‍ಟಿಸಿ ಬಸ್‍ಗಳ ಪ್ರಯಾಣ ದರ ಪೈಪೋಟಿ ನಿಲ್ಲಬೇಕು. ಖಾಸಗಿ ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಖಾಸಗಿ ಬಸ್ ಮಾಲೀಕರು ಸರ್ಕಾರದ ಮುಂದಿಟ್ಟಿದ್ದಾರೆ. ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

Share

Leave a Comment