ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಸಚಿವರ ವಾಗ್ವಾದ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜೂ. ೧೯ – ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಸರ್ಕಾರ ವಿಧೇಯಕ ತರಲು ಮುಂದಾಗಿದ್ದು, ಇದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ವಿಧಾನ ಪರಿಷತ್‌ನಲ್ಲಿಂದು ಸ್ಪಷ್ಟಪಡಿಸಿದರು.

250 ಅಧಿಕಾರಿಗಳ ನೇಮಕ
ರಾಜ್ಯದಲ್ಲಿ ಖಾಲಿ ಇರುವ 250 ಆಹಾರ ಸುರಕ್ಷತಾ ಅಧಿಕಾರಿಗಳ ಹುದ್ದೆಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದರು.  ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರ ಈ ಬಗ್ಗೆ ಉತ್ಸುಕವಾಗಿದ್ದು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈಗಾಗಲೇ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಅದನ್ನು ವಿಧಾನ ಪರಿಷತ್‌ನಲ್ಲೂ ಮಂ‌ಡಿಸಿ ಸದನದ ಒಪ್ಪಿಗೆ ಪಡೆದು ವಿಧೇಯಕವನ್ನು ಜಾರಿ ಮಾಡಿಯೇ ತೀರುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮಧ್ಯಪ್ರವೇಶಿಸಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ವಿಧೇಯಕ ಬಗ್ಗೆ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಿ ಇಲ್ಲವೆ ಜಂಟಿ ಸದನ ಸಮಿತಿಗೆ ಒಪ್ಪಿಸಿ, ಸಾಧಕ-ಬಾಧಕಗಳ ಬಳಿಕ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಸಚಿವರು, ಜಂಟಿ ಸದನ ಸಮಿತಿಗೆ ಒಪ್ಪಿಸಿದರೆ ಆ ವಿಧೇಯಕ ವಿಳಂಬವಾಗುವುದು ಖಚಿತ, ಹೀಗಾಗಿ ಸದನದಲ್ಲಿ ಎಲ್ಲರಿಗೂ ಮಾತನಾಡಲು ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ನಿಮ್ಮ ಗೊಂದಲಗಳನ್ನು ಹೇಳಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಮುಂದಾಗಿರುವ ಸರ್ಕಾರದ ಕ್ರಮಗಳನ್ನೂ ಹೇಳಲಾಗುವುದು ಎಂದರು.

ಯಾವುದೇ ಪೂರ್ವಾಗ್ರಹ ಪೀಡಿತವಾಗಿ ಏಕಾ-ಏಕಿ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ 9 ತಿಂಗಳಿಂದ ನಿರಂತರವಾಗಿ ಚರ್ಚೆ ನಡೆಸಿ ಈ ಸಂಬಂಧ ಸಮಿತಿಯನ್ನೂ ರಚಿಸಿ ಜನ ಸಾಮಾನ್ಯರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸುವ ಸಲುವಾಗಿ ಈ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ವಿಧೇಯಕವನ್ನು ತರಲಾಗುತ್ತಿದೆ ಎಂದರು.

ಈ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ರಮೇಶ್ ಬಾಬು, ವಿಧಾನ ಪರಿಷತ್‌ನಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ವಿಧೇಯಕ ಮಂಡನೆಯಾಗುವುದಿಲ್ಲ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಈ ಬಗ್ಗೆ ಸಚಿವರು ವಿಧೇಯಕವನ್ನು ಮಂಡಿಸುತ್ತೀರೊ ಇಲ್ಲವೊ ಎನ್ನುವುದನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ವಿಧೇಯಕ ತರುವ ಕ್ರಮದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

Leave a Comment