ಖಾಸಗಿವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ; ಸರ್ಕಾರ ಬದ್ದ

ದಾವಣಗೆರೆ.ನ.1; ಖಾಸಗಿ ವಲಯದಲ್ಲಿ ಆದ್ಯತೆಯ ಮೇಲೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯುವಂತಾಗಲು ನಮ್ಮ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಅವರು ಜಾಗತೀಕ ಹಾಗೂ ಮುಕ್ತ ಮಾರುಕಟ್ಟೆಯ ಕಾಲಘಟ್ಟದಲ್ಲಿರುವ ಈ ಯುಗದಲ್ಲಿ ಕನ್ನಡ ಸಾಹಿತ್ಯ ಸಮೃದ್ಧಿಯನ್ನು ಹೆಚ್ಚಿಸುವುದಕ್ಕಿಂತ ವ್ಯವಹಾರಿಕವಾಗಿ ಕನ್ನಡ ಬಳಕೆಯನ್ನು ಎಲ್ಲಾ ಆಧುನಿಕ ಮಾಧ್ಯಮದಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಅದರಲ್ಲೂ ಕಂಪ್ಯೂಟರ್ ನಮ್ಮ ದೈನಂದಿನ ಬದುಕಿಗೆ, ಕಾರ್ಯಶೈಲಿಗೆ ಅನಿವಾರ್ಯವಾಗಿರುವ ಈ ಸಂದರ್ಭದಲ್ಲಿ ಕನ್ನಡ ತಂತ್ರಾಂಶಗಳು ಹೆಚ್ಚಾಗದೇ ಹೊದರೆ ಹಾಗೂ ಅಂತರ್ಜಾಲ ಸಂವಹನ ಕನ್ನಡದಲ್ಲಿ ಸಾಧ್ಯವಾಗದೇ ಹೋದರೆ ಮುಂದಿನಪೀಳಿಗೆಗೆ ಕನ್ನಡ ಕಲಿಕೆ ಹಾಗೂ ಅಧ್ಯಯನ ಕಠಿಣವಾಗುವ ಸಾಧ್ಯತೆಗಳನ್ನು ಮನಗಾಣಬೇಕು. ಜಾಗತೀಕರಣದ ನೆಪ ಹೇಳಿ ರಾಜ್ಯದಲ್ಲಿರುವ ಎಂಎನ್ ಸಿ ಕಂಪನಿಗಳು ಕನ್ನಡಿಗರ ಉದ್ಯೋಗ ಸೃಷ್ಠಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯದ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಕಡ್ಡಾಯವಾಗಿ 100ಕ್ಕೆ ನೂರರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಅಲ್ಲದೇ ಸರ್ಕಾರದ ಎಲ್ಲಾ ಕಡತಗಳಲ್ಲಿನ ಟಿಪ್ಪಣಿಗಳು ಕನ್ನಡದಲ್ಲಿ ಸಲ್ಲಿಸುವಂತೆ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಕನ್ನಡ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ನಿಲುವು ಕೈಗೊಂಡಿದೆ. ಅಲ್ಲದೇ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗಿತ್ತದೆ. ಈ ನೆಲದ ಮೂಲಭಾಷೆಯಾಗಿರುವ ಕನ್ನಡವನ್ನು ಬಲಪಡಿಸುವ ಕೆಲಸವಾಗಬೇಕಾಗಿದೆ ಎಂದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಪುರಸ್ಕರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿ.ಪಂ ಸಿಇಒ ಎಸ್ ಅಶ್ವತಿ, ಎಸ್ಪಿ ಆರ್ ಚೇತನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment