ಖಾತೆ ಹಂಚಿಕೆ ವಿಳಂಬ: ವಿಶ್ವ ಟೀಕೆ

ಬೆಂಗಳೂರು, ಜೂ. ೧೮- ಬಿಜೆಪಿಗೆ ಜಿಗಿಯುವ ಬೆದರಿಕೆ ಹಾಕಿ ಅತ್ತೂ ಕರೆದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಪಕ್ಷೇತರ ಶಾಸಕರುಗಳಿಗೆ ಇನ್ನು ಖಾತೆ ಹಂಚಿಕೆಯಾಗದಿರುವುದು ಅತೃಪ್ತಿ-ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ.
ರಾಣೆಬೆನ್ನೂರಿನ ಶಾಸಕ ಆರ್. ಶಂಕರ್, ಮುಳುಬಾಗಿಲಿನ ಶಾಸಕ ಎಚ್. ನಾಗೇಶ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ನಾಲ್ಕೈದು ದಿನ ಕಳೆದರೂ ಇನ್ನೂ ಖಾತೆ ಹಂಚಿಕೆಯಾಗದಿರುವುದು ಹೆಸರಿಗಷ್ಟೇ ಸಚಿವರು ಎನ್ನುವಂತಾಗಿದೆ.
ಈ ನಡುವೆ ನೂತನ ಸಚಿವ ನಾಗೇಶ್, ಇಂಧನ ಇಲ್ಲವೆ ಪ್ರಾಥಮಿಕ ಶಿಕ್ಷಣ ಖಾತೆಗೆ ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳ ಬಳಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ತಾವು ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿರುವುದರಿಂದ ತಮಗೆ ನೀಡುವ ಯಾವುದೇ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ಆ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿ 2ನೇ ಬಾರಿಗೆ ಮತ್ತೆ ಸಚಿವಸ್ಥಾನ ಗಿಟ್ಟಿಸಿಕೊಂಡಿರುವ ಶಂಕರ್ ಕೂಡ ಅರಣ್ಯಖಾತೆ ಇಲ್ಲವೆ ಪ್ರಮುಖ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ, ನೂತನ ಸಚಿವರಿಗೆ ಯಾವ ಖಾತೆ ನೀಡುವುದು ಎನ್ನುವುದು ಮುಖ್ಯಮಂತ್ರಿಗಳಿಗೆ ಗೊಂದಲದ ಗೂಡಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಸಚಿವರಾದ ಒಂದೆರೆಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡುವುದು ಸಾಮಾನ್ಯ. ಅದರಲ್ಲೂ ಅತ್ತೂ ಕರೆದು ಸಚಿವರಾದವರಿಗೆ ವಿಶೇಷ ರಿಯಾಯಾತಿ ಎನ್ನುವಂತೆ ಬೇಗ ಖಾತೆ ಹಂಚಿಕೆ ಮಾಡುವುದನ್ನೂ ಕಂಡಿದ್ದೇವೆ. ಆದರೆ, ನಾಲ್ಕೈದ ದಿನಗಳಾದರೂ ಇನ್ನೂ ಖಾತೆ ಹಂಚಿಕೆ ಮಾಡದಿರುವುದು ನೂತನ ಸಚಿವರು ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವಂತಾಗಿದೆ.
ಹೆಸರಿಗಷ್ಟೇ ಸಚಿವರಾಗಿರುವ ಈ ಇಬ್ಬರು ನೂತನ ಸಚಿವರು, ತಮಗೆ ಯಾವ ಇಲಾಖೆ ಸಿಗಲಿದೆಯೋ? ಎಂದು ಎದುರು ನೋಡುವಂತಾಗಿದೆ.
ವಿಶ್ವನಾಥ್ ಅಸಮಾಧಾನ
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಇಬ್ಬರು ಸಚಿವರಿಗೆ ನಾಲ್ಕೈದು ದಿನಗಳು ಕಳೆದರೂ ಖಾತೆ ಹಂಚಿಕೆ ಮಾಡದಿರುವುದು ನೂತನ ಸಚಿವರಿಗೆ ಅವಮಾನ ಮಾಡಿದಂತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಖಾತೆ ಹಂಚಿಕೆ ಮಾಡದಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನಡೆ ಸರಿಯಲ್ಲ. ಹೆಚ್. ಮಹೇಶ್ ಪ್ರಾಥಮಿಕ ಶಿಕ್ಷಣ ಇಲಾಖೆಗೆ ರಾಜೀನಾಮೆ ನೀಡಿದ ಬಳಿಕ ಶಿಕ್ಷಣ ಇಲಾಖೆಯಲ್ಲಿ ಯಾರು ಸಚಿವರು ಇಲ್ಲದಂತಾಗಿದೆ. ಪ್ರಮುಖ ಖಾತೆಗಳಿಗೆ ಹೀಗಾದರೆ, ಉಳಿದ ಖಾತೆಗಳ ಗತಿ ಏನು? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಳಿ ಇರುವ ಅಬಕಾರಿ ಸೇರಿದಂತೆ ಹಲವು ಖಾತೆಗಳು ಹಂಚಿಕೆಯಾಗಿಲ್ಲ. ಇದರಿಂದ ಆಡಳಿತ ವೈಖರಿಗೂ ಕಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಬೇಸರದ ಸಂಗತಿ. ಅವರಿಗೆಸಚಿವ ಸ್ಥಾನ ಸಿಕ್ಕಿದ್ದರೆ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರಿಗೂ ಅವಕಾಶ ಕೊಟ್ಟಂತಾಗುತ್ತಿತ್ತು. ಆ ಕೆಲಸವನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

Leave a Comment