ಖಾತೆ ಬದಲಾವಣೆಗೆ ಸಚಿವ ಆನಂದ್ ಸಿಂಗ್ ಮನವಿ

ಬೆಂಗಳೂರು, ಫೆ. ೧೪- ಅರಣ್ಯ ಒತ್ತುವರಿ ಆರೋಪಕ್ಕೆ ಗುರಿಯಾಗಿ ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ವಿಜಯನಗರದ ಶಾಸಕ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಜವಾಬ್ದಾರಿ ವಹಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರ ಖಾತೆ ಬದಲಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ – ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆನಂದ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ, ತಮಗೆ ನೀಡಿರುವ ಅರಣ್ಯ ಖಾತೆಯನ್ನು ಬದಲಾಯಿಸಿ, ಬೇರೊಂದು ಖಾತೆಯ ಜವಾಬ್ದಾರಿ ನೀಡುವಂತೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಆದರೆ ತಕ್ಷಣಕ್ಕೆ ಖಾತೆ ಬದಲಿಸಲು ಒಪ್ಪದ ಯಡಿಯೂರಪ್ಪ ಅವರು ಸದ್ಯಕ್ಕೆ ನೀವು ಇದೇ ಖಾತೆಯಲ್ಲಿ ಮುಂದುವರೆಯಿರಿ ಎಂದು ಆನಂದ್ ಸಿಂಗ್ ಅವರಿಗೆ ಸಮಾಧಾನ ಮಾಡಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರುವ ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದ್ದು, ಆನಂದ್ ಸಿಂಗ್ ಅವರ ವಿಚಾರವನ್ನು ಪ್ರತಿಪಕ್ಷಗಳು ಪ್ರಬಲ ಅಸ್ತ್ರವನ್ನಾಗಿ ಬಳಕೆ ಮಾಡುವ ಸಾಧ್ಯತೆಗಳಿದ್ದು, ಅಷ್ಟರೊಳಗೆ ಅವರ ಖಾತೆ ಬದಲಾಗುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ನ‌‌ಡೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆನಂದ್ ಸಿಂಗ್ ಅವರಿಗೆ ಮೊದಲಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಖಾತೆಯನ್ನು ಕರುಣಿಸಿದ್ದರು. ರಾತ್ರೋರಾತ್ರಿ ಆನಂದ್ ಸಿಂಗ್ ಅವರ ಖಾತೆ ಬದಲಾಗಿದ್ದು, ಬಿಜೆಪಿ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು.

ಅರಣ್ಯ ಒತ್ತುವರಿ ಸಂಬಂಧ ಆನಂದ್ ಸಿಂಗ್ ಅವರು, ಈಗಾಗಲೇ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದು, ಅಂತಹವರ ಕೈಗೆ ಅರಣ್ಯ ಖಾತೆ ಕೊಟ್ಟಿರುವುದು ‘ಕಟುಕನ ಕೈಗೆ ಕುರಿ’ ನೀಡಿದಂತಾಗಿದೆ ಎಂಬ ವಿಶ್ಲೇಷಣೆ ಭಾರೀ ಸದ್ದುಮಾಡಿದೆ.

ಈ ಬಗ್ಗೆ ನೂತನ ಸಚಿವರ ಪೈಕಿ ಹಲವಾರು ಮಂದಿ ಬಳಿ ಪತ್ರಕರ್ತರು ಪ್ರತಿಕ್ರಿಯೆ ಬಯಸಿದಾಗ ನೇರವಾಗಿ ಏನನ್ನೂ ಹೇಳದೆ, ಅತ್ಯಂತ ನಯವಾಗಿ ಜಾರಿಕೊಂಡಿದ್ದರು. ಸಿಂಗ್ ಅವರ ಮೇಲಿರುವುದು ಕೇವಲ ಆರೋಪ, ಯಾವುದೂ ಸಾಬೀತಾಗಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದ್ದರು.

ವರಿಷ್ಠರ ಸೂಚನೆ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಭಾಗಿಯಾಗಿದ್ದಾರೆ ಎಂಬ ಆರೋಪ ಕುರಿತಂತೆ, ಎರಡು ದಿನಗಳಲ್ಲಿ ಸಮಗ್ರ ವರದಿ ನೀಡಬೇಕೆಂದು ಬಿಜೆಪಿ ವರಿಷ್ಠರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರ ಆರೋಪ ಹೊತ್ತಿರುವವರನ್ನು ಸಂಪುಟದಲ್ಲಿ ಮುಂದುವರೆಸಿದರೆ, ರಾಷ್ಟ್ರ ಮಟ್ಟದಲ್ಲಿ ಪಕ್ಷ ಮುಜುಗರಕ್ಕೆ ಈಡಾಗುವ ಸಾಧ್ಯತೆಗಳಿದ್ದು, ಇದರಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ವರದಿ ಕೇಳಿದ್ದಾರೆ ಎನ್ನಲಾಗಿದೆ.

ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು, ಆನಂದ್ ಸಿಂಗ್ ಅವರ ವಿರುದ್ಧದ ಪ್ರಕರಣಗಳ ಸತ್ಯಾಸತ್ಯತೆ, ವಸ್ತುಸ್ಥಿತಿ ಕುರಿತು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ, ವರಿಷ್ಠರಿಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.

Leave a Comment