ಖಾತಾ, ಮೊಟೇಷನ್ ಲಂಚ ಬೇಡಿಕೆ  ಪೌರಾಯುಕ್ತರಿಗೆ ಹಿಗ್ಗಾಮುಗ್ಗಾ ತರಾಟೆ

ರಾಯಚೂರು.ಮಾ.14- ಖಾತಾ ಎಕ್ಸ್‌ಟ್ರ್ಯಾಕ್ಟ್, ಮೊಟೇಷನ್‌ ಲಂಚ ಷರತ್ತಿಗೆ ತೀವ್ರ ಕೆಂಡಾಮಂಡಲರಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಜಲ್ದಾರ, ನಗರಸಭೆ ಪೌರಾಯುಕ್ತರನ್ನು ಏಕವಚನದಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸ್ವಂತ ಮಾಲೀಕತ್ವದ ಮನೆ ಖಾತಾ, ಕನ್ಸ್‌ಸ್ಟ್ರಕ್ಷನ್ ಸೇರಿದಂತೆ ಮೊಟೇಷನ್‌ಗಾಗಿ ಶುಲ್ಕ ಪಾವತಿಸಿ ಅಗತ್ಯ ದಾಖಲೆ ಸಮೇತ ಅರ್ಜಿ ಸಲ್ಲಿಸಿ ಆರು ತಿಂಗಳು ಗತಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಡತ ಮೇಲಾಧಿಕಾರಿಗಳಿಗೆ ವರ್ಗಾಯಿಸಲು ತಲಾ ಕಡ‌ತಕ್ಕೆ 3 ಸಾವಿರ ರೂ. ಲಂಚ ಬೇಡಿಕೆಯಿಡಲಾಗುತ್ತಿದೆ. ಸಾರ್ವಜನಿಕರಿಂದ ಸ್ವೀಕೃತಗೊಂಡ ಖಾತಾ ಅರ್ಜಿಗಳನ್ನು ನ್ಯಾಯಯುತ ವರ್ಗಾಯಿಸುವಂತೆ ಪ್ರಶ್ನಿಸುವ ನಾಗರೀಕರ ಕಡತಗಳನ್ನು ಉದ್ದೇಶಪೂರಕವಾಗಿ ತಿರಸ್ಕರಿಸಿ ಕಛೇರಿ ಅಲೆಯುವಂತೆ ಮಾಡಲಾಗಿದೆ.
ಕನ್ಸ್‌ಸ್ಟ್ರಕ್ಷನ್ ಸೇರಿದಂತೆ ಖಾತಾ ಹಾಗೂ ಮೊಟೇಷನ್‌ಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮೂಲೆ ಗುಂಪು ಮಾಡಿ ಲಂಚ ನೀಡುವ ಆಪ್ತರಿಗೆ ಮಾತ್ರ ಖಾತಾ ದಾಖಲೆ ವಿತರಿಸಲಾಗುತ್ತಿದೆ. ಖಾತಾ ಎಕ್ಸ್‌ಟ್ರ್ಯಾಕ್ಟ್‌ನಲ್ಲಿ ತೀರಾ ವಿಳಂಬತೆ ಕಾಯ್ದುಕೊಳ್ಳುವ ಕುರಿತು ಅಧಿಕಾರಿ ಗಂಗಾಧರ ರವರನ್ನು ಪ್ರಶ್ನಿಸಿದರೆ ತಲಾ 3 ಸಾವಿರ ರೂ. ಲಂಚ ನೀಡುವ ಅರ್ಜಿದಾರರಿಗೆ ಮಾತ್ರ ಖಾತಾ ಹಾಗೂ ಮೊಟೇಷನ್ ದಾಖಲೆ ನೀಡುವಂತೆ ಪೌರಾಯುಕ್ತರೇ ಷರತ್ತು ವಿಧಿಸಿದ್ದಾರೆಂದು ಹೇಳಲಾಗುತ್ತಿದೆ.
ಕಳೆದ ಆರು ತಿಂಗಳಿಂದ ಖಾತಾ ಮತ್ತು ಮೊಟೇಷನ್ ದಾಖಲೆ ವಿತರಣೆಯಲ್ಲಿಯಾಗುತ್ತಿರುವ ತೀರಾ ವಿಳಂಬತೆಗೆ ತಾವೇ ನೇರ ಕಾರಣರೆಂದು ಟೇಬಲ್ ಕುಟ್ಟಿ ಆಕ್ರೋಶಗೊಂಡರು. ಮೇಲಾಧಿಕಾರಿಗಳು ಮಾಡುವ ಲಂಚಾವತಾರವನ್ನು ಮರೆ ಮಾಚಿ ಬಡಪಾಯಿ ಕ್ಲರ್ಕ್ ಮೇಲೆ ಇಲ್ಲ-ಸಲ್ಲದ ಆರೋಪ ಹೊರೆಸುವ ಮನುಧೋರಣೆ ಕೈ ಬಿಟ್ಟು ಖಾತಾ ನಕಲುಗಾಗಿ ಲಂಚ ಷರತ್ತು ವಿಧಿಸುವ ಕಳಂಕಿತ ಅಧಿಕಾರಿಗಳನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸುವಂತೆ ಗರಂ ಆದರು.
ಅಮರೇಶ, ಶಂಶುದ್ದೀನ್, ಅರುಣ್‌ಕುಮಾರ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment