ಖಾಕಿ ವಲಯದಲ್ಲಿ ಕನ್ನಡ ಕಲರವ : ಎಸ್‌ಜಿಎಸ್ ತೃಪ್ತಿ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಏ. ೨೧ – ಪೊಲೀಸ್ ಇಲಾಖೆಯಲ್ಲಿ ಕಾಲ ಕಾಲಕ್ಕೆ ಕನ್ನಡ ಸಾಂಸ್ಕೃತಿಕ, ಸಾಹಿತ್ಯಿಕ ಸಭೆ, ಸಮಾರಂಭಗಳನ್ನು ನ‌ಡೆಸುವ ಮೂಲಕ ಕನ್ನಡ ಪರ ವಾತಾವರಣ ಮೂಡಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಕನ್ನಡ ಸಂಘಟನೆಯನ್ನು ಬಲಗೊಳಿಸಿ ಸಾಂಸ್ಕೃತಿಕ ವಾತಾವರಣ ಮೂಡಿಸಬೇಕಾಗಿದೆ ಎಂದರು.  ಇತರ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಕನ್ನಡದ ಬಳಕೆ ತೃಪ್ತಿದಾಯಕವಾಗಿದೆ. ಇಲಾಖೆಯಲ್ಲಿರುವ ಕವಿಗಳು, ಸಾಹಿತಿಗಳು, ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯದ ವಿಸ್ತರಣೆಯನ್ನು ಮಾಡಬೇಕಾಗಿದೆ ಎಂದು ಹೇಳಿದರು.

ತಂತ್ರಾಂಶದ ನೆಲೆಯೊಳಗೆ ಕನ್ನಡದ ಸುಧಾರಣೆಗಳನ್ನು ಒಪ್ಪಿಕೊಳ್ಳಬೇಕಾಗಿದೆ. ಜನ ಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಗಳನ್ನು ಬಳಸಬೇಕು. ಪೊಲೀಸ್ ಇಲಾಖೆಯ ಕನ್ನಡತನವನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿ ಬರಹಗಳನ್ನು ಹಾಕಿ ಕೀಳರಿಮೆ ಬೆಳೆಸುವ ಮೇಳರಿಮೆ ಪ್ರಾಬಲ್ಯಗೊಳಿಸುವುದನ್ನು ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಕೆಲ ಐಟಿ ಕಂಪನಿಗಳಲ್ಲಿ ಕನ್ನಡ ಮಾತನಾಡುವ ಉದ್ಯೋಗಿಗಳ ಮೇಲೆ ದೌರ್ಜನ್ಯವೆಸಗಿ ಕೆಲಸದಿಂದ ಹೊರ ಹಾಕುವ ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ವಸ್ತುಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಅವರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದರು.

ಪೊಲೀಸ್ ಇಲಾಖೆಯ ಒಳಗೆ ಪದ ವಿವರಣೆ ಪೋಷವನ್ನು ರಚಿಸಿ ಕನ್ನಡಕ್ಕೆ ಒಗ್ಗದ ಶಬ್ಧಗಳನ್ನು ಬಳಸಿ ಜನಸ್ನೇಹಿ ಪರಿಭಾಷೆ ಬಳಸಿ ತಂತ್ರಾಂಶ ಬಳಕೆಯಲ್ಲಿ ಕನ್ನಡ ಹೆಚ್ಚು ಮಾಡುವಂತೆ ಸಲಹೆ ನೀಡಿದರು.

ಕೇಂದ್ರ ಸರ್ಕಾರ ಹಿಂದಿ ಘಟಕ ಸ್ಥಾಪಿಸಿ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವಂತೆಯೇ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಕನ್ನಡ ಘಟಕಗಳನ್ನು ಸ್ಥಾಪಿಸಿ ಕನ್ನಡ ವಾತಾವರಣವನ್ನು ಮೂಡಿಸುವಂತೆ ಅವರು ಸಲಹೆ ಮಾಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ಕುವೆಂಪು ಸೇರಿದಂತೆ ಹಿರಿಯ ಕವಿಗಳ ನುಡಿಗಟ್ಟುಗಳನ್ನು ಪ್ರಕಟಿಸಬೇಕು. ಪದವಿ, ಡಾಕ್ಟರೆಟ್ ಸೇರಿದಂತೆ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಪೊಲೀಸ್ ಇಲಾಖೆಯಲ್ಲಿ ಕನ್ನಡ ಬಳಕೆ ಹೆಚ್ಚಿರುವುದು ಸಮಾಧಾನಕರ ಸಂಗತಿ ಎಂದರು.

ಪೊಲೀಸ್ ಇಲಾಖೆಯಿಂದ ಪ್ರಕಟಿಸುವ ಯಾವುದೇ ಪ್ರಕಟಣೆಯಾಗಲಿ, ಹೇಳಿಕೆಯಾಗಲಿ ಕನ್ನಡದಲ್ಲೇ ನೀಡಬೇಕು. ಅನಿವಾರ್ಯ ಕಾರಣಗಳಿಗಾಗಿ ಇಲ್ಲವೆ, ಕೇಂದ್ರದೊಂದಿಗೆ ಸಂಪರ್ಕಿಸುವಾಗ ಮಾತ್ರ ಇಂಗ್ಲಿಷ್ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಚಂದ್ರು ಅವರು, ಕನ್ನಡದ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸುವುದನ್ನು ನಿಲ್ಲಿಸಿ, ಕನ್ನಡ, ಇಂಗ್ಲಿಷ್ ಭಾಷೆ ಎರಡರಲ್ಲೂ ನಾಮಫಲಕ ಹಾಕಿಕೊಳ್ಳಬಹುದು ಎನ್ನುವ ಆದೇಶ ಹೊರಡಿಸುವಂತೆ ಸಲಹೆ ನೀಡಿದರು.

ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು, ಪೊಲೀಸ್ ಇಲಾಖೆಯಲ್ಲಿನ ಸಾಹಿತ್ಯಾಸಕ್ತರು ಹಾಗಾಗ ಸಭೆ ಸೇರಿ ಕನ್ನಡ ವಾತಾವರಣವನ್ನು ಗಟ್ಟಿಗೊಳಿಸಬೇಕು, ಕನ್ನಡದ ಸುಲಲಿತ ತಂತ್ರಾಂಶದ ಆಪ್‌ಗಳನ್ನು ಬಳಕೆ ಮಾಡಬೇಕು ಎಂದು ಹೇಳಿದರು.

ಜಂಟಿ ಪೊಲೀಸ್ ಆಯುಕ್ತ ರಾಜಪ್ಪ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸರಿಗಾಗಿಯೇ ಪೊಲೀಸ್ ಗೋಷ್ಠಿಯನ್ನು ನಡೆಸುವಂತೆ ಎರಡು ಬಾರಿ ಸಾಹಿತ್ಯ ಪರಿಷತ್‌ಗೆ ಪತ್ರ ಬರೆದಿದ್ದೆ. ಆದರೆ, ಇಲ್ಲಿಯವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಪೊಲೀಸರೇ ಸೇರಿಕೊಂಡು ನಡೆಸಿದ 5ಕ್ಕೂ ಹೆಚ್ಚು ಸಮ್ಮೇಳನದಲ್ಲಿ 3 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನಗಳಲ್ಲಿ ಪೊಲೀಸರನ್ನು ಭದ್ರತೆಗೆ ಕರೆಯುವುದರ ಜತೆಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕು ಎಂದರು.  ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸಲಹೆ ಸೂಚನೆಗಳನ್ನು ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಮಾಲಿನಿ ಕೃಷ್ಣಮೂರ್ತಿ, ಎಸ್. ರವಿ, ಹಿತೇಂದ್ರ ಸೇರಿ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment