ಖಲಿಸ್ತಾನ್ ನಾಯಕ ಲಾಹೋರ್‌ನಲ್ಲಿ ಹತ್ಯೆ

ಲಾಹೋರ್, ಜ. ೨೮- ಖಲಿಸ್ತಾನ್ ಲಿಬರೇಷನ್ ಫೋರ್ಸ್ (ಕೆಎಲ್‌ಎಫ್)ನ ಅತ್ಯುನ್ನತ ನಾಯಕ ಹರ್ಮಿತ್ ಸಿಂಗ್ ಅಲಿಯಾಸ್ ಹ್ಯಾಪಿ ಪಿಹೆಚ್‌ಡಿನನ್ನು ಲಾಹೋರ್‌ನಲ್ಲಿ ಹತ್ಯೆ ಮಾಡಲಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ನಾಯಕನ ಹತ್ಯೆ ಸೇರಿದಂತೆ, ಹಲವು ಗಂಭೀರ ಪ್ರಕರಣಗಳಲ್ಲಿ ಭಾರತದ ಅಧಿಕಾರಿಗಳಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಹರ್ಮಿತ್ ಸಿಂಗ್‌ನನ್ನು ಲಾಹೋರ್ ಬಳಿ ಸ್ಥಳೀಯ ಗ್ಯಾಂಗ್ ಹತ್ಯೆ ಮಾಡಿದೆ. ಈ ಹತ್ಯೆಗೆ ಮಾದಕ ವಸ್ತು ಕಳ್ಳಸಾಗಾಣಿಕೆ, ಹಣಕಾಸು ವಿವಾದ ಕಾರಣ ಎಂದು ಹೇಳಲಾಗಿದೆ.
ಹರ್ಮಿತ್ ಸಿಂಗ್ ೨೦೧೬ – ೧೭ ರಲ್ಲಿ ನಡೆದ ಆರ್‌ಎಸ್‌ಎಸ್ ನಾಯಕನ ಹತ್ಯೆಯಲ್ಲಿ ಭಾಗವಹಿಸಿರುವ ಆರೋಪವನ್ನು ಹೊತ್ತಿದ್ದಾರೆ. ಇದರ ಜೊತೆಗೆ ಪಂಜಾಬ್‌ನ ಸ್ವರ್ಣಮಂದಿರದಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕೋತ್ಸವ ಸಂದರ್ಭದಲ್ಲಿ ದಾಳಿ ನಡೆಸುವ ಸಂಚನ್ನು ಹೂಡಿದ್ದ ಆರೋಪ ಸೇರಿದಂತೆ, ಹಲವು ಆರೋಪಗಳ ಹಿನ್ನೆಲೆಯಲ್ಲಿ ಇವರು ಭಾರತಕ್ಕೆ ಅಗತ್ಯವಾಗಿ ಬೇಕಿದ್ದರು.
ಪಾಕಿಸ್ತಾನ ಮೂಲದ ಹರ್ಮಿತ್ ಸಿಂಗ್, ಕೆಎಲ್‌ಎಫ್‌ನ ಮುಖ್ಯಸ್ಥನ ಸ್ಥಾನದಲ್ಲೂ ಕೆಲವು ಕಾಲ ಕಾರ್ಯ ನಿರ್ವಹಿಸಿದ್ದರು. ಅದರ ಮುಖ್ಯಸ್ಥರಾದ ಹರ್ವೀಂದರ್ ಮಿಂಟೋ ಅವರನ್ನು ಪಂಜಾಬ್ ಪೊಲೀಸರು, ಥೈಲ್ಯಾಂಡ್‌ನಲ್ಲಿ ೨೦೧೪ ರಲ್ಲಿ ಬಂಧಿಸಿದ ನಂತರ, ಆ ಸ್ಥಾನದಲ್ಲಿ ಹರ್ಮಿತ್ ಸಿಂಗ್ ಕಾರ್ಯನಿರ್ವಹಿಸಿದ್ದರು.
ಹರ್ಮಿತ್ ಸಿಂಗ್, ಅಮೃತ್‌ಸರದ ಚೆಹರ್ಥಾದ ನಿವಾಸಿಯಾಗಿದ್ದು, ಇವರು ಪಿಹೆಚ್‌ಡಿ ಪದವಿ ಹೊಂದಿದ್ದಾರೆ. ಹೀಗಾಗಿ ಇವರನ್ನು ಹ್ಯಾಪಿ ಪಿಹೆಚ್‌ಡಿ ಎಂದೂ ಕರೆಯಲಾಗುತ್ತದೆ.

Leave a Comment