ಖರ್ಗೆ ಅಣತಿ ಪರಿಪಾಲಿಸುವೆ

ಬೆಂಗಳೂರು, ಸೆ.೧೨- ಕಾಂಗ್ರೆಸ್ ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಸಮಾನರು, ನಮ್ಮ ರಾಜಕೀಯ ಗುರುಗಳು, ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡುರುವುದರಿಂದ ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಚೆಂಡು ಖರ್ಗೆ ಅವರ ಪಾಳಯದಲ್ಲಿದೆ.

ಇಂದು ಬೆಳಿಗ್ಗೆ ಖರ್ಗೆ ಅವರ ಮನೆಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ನಾವೀಗ ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಹಿರಿಯರು ಅನುಭವಿಗಳು ಜೊತೆಗೆ ಅವರು ನಮ್ಮ ತಂದೆ ಸಮಾನರು, ನಮ್ಮ ಗುರುಗಳು, ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದರು.

ಖರ್ಗೆ ಅವರ ಅಣತಿಯಂತೆ ನಡೆದುಕೊಳ್ಳುವುದಾಗಿ ಹೇಳುವ ಮೂಲಕ ಡಿಕೆಶಿ ಬಣದ ವಿರುದ್ಧ ರಮೇಶ್ ಹೊಸ ದಾಳ ಉರುಳಿಸಿದ್ದಾರೆ. ನಾನು ವಾಲ್ಮೀಕಿ ಜನಾಂಗದ ಪ್ರಭಾವಿ ನಾಯಕ. ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ಸಮುದಾಯದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲಾ ಒಟ್ಟಾಗಿ ನಿಲ್ಲುತ್ತೇವೆ. ಆದ್ದರಿಂದ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಹಿರಿಯ ನಾಯಕರಲ್ಲಿ ಮನವಿ ಮಾಡಿದ್ದೇವೆ. ಯಾರು ಸಚಿವರಾಗಬೇಕು ಎಂದು ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್ ಅವರಿಗೆ ತಿಳಿಸಿದ್ದೇವೆ ಎಂದು ರಮೇಶ್ ತಿಳಿಸಿದ್ದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಚಿವ ಡಿಕೆಶಿ ಅವರು ಸದ್ದಿಲ್ಲದೆ ತಮ್ಮ ಹಿಡಿತ ಸಾಧಿಸಲು ಹೊರಟಿದ್ದಾರೆ ಎಂಬ ಆರೋಪ ಸಹ ಜಾರಕಿಹೊಳಿ ಸಹೋದರರಾಗಿದ್ದು, ಬಳ್ಳಾರಿಯ ಶಾಸಕ ಬಿ.ನಾಗೇಂದ್ರ ಅವರನ್ನು ಸಹ ತಮ್ಮ ಜೊತೆಯಲ್ಲಿಟ್ಟುಕೊಂಡಿರುವುದು ಅವರಿಗೆ ಹೆಚ್ಚಿನ ಶಕ್ತಿ ತಂದಿದೆ.

ಜಾರಕಿಹೊಳಿ ಮನೆಗೆ ಮುಖಂಡರ ದಂಡು

ಬೆಳಗಾವಿ ಜಿಲ್ಲೆಯಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಎಂಬ ಆರೋಪದಲ್ಲಿ ಜಾರಕಿಹೊಳಿ ಸಹೋದರರು ಅಸಮಾಧಾನ ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಸಮಧಾನಗೊಳಿಸಲು ಕಾಂಗ್ರೆಸ್ ಮುಖಂಡರ ದಂಡು ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಎಡಬಿಡದೆ ಎಡತಾಕುತ್ತಿದೆ.
ಬೆಂಗಳೂರಿನ ಸಪ್ತ ಸಚಿವರ ನಿವಾಸದಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಸಿ. ಕೊಂಡಯ್ಯ ಹಾಗೂ ಆರ್.ಬಿ. ತಿಮ್ಮಾಪುರ ಅವರು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ನಿನ್ನೆ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರು. ನಿನ್ನೆ ಒಂದೇ ದಿನ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ 3 ಬಾರಿ ರಮೇಶ್ ಅವರನ್ನು ಭೇಟಿ ಮಾಡಿ ಪಕ್ಷ ತ್ಯಜಿಸುವ ಯಾವುದೇ ನಿರ್ಧಾರ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಡಿಕೆಶಿ ಅವರು ಅನಗತ್ಯವಾಗಿ ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ತಲೆ ಹಾಕುತ್ತಿರುವ ಬಗ್ಗೆ ಜಾರಕಿಹೊಳಿ ಆರೋಪಿಸಿದರೆನ್ನಲಾಗಿದೆ. ಪ್ರತಿ ಬೆಳವಣಿಗೆಗಳನ್ನು ದಿನೇಶ್ ಗುಂಡೂರಾವ್ ಅವರು ಪಕ್ಷದ ಹೈಕಮಾಂಡ್‌ಗೆ ವರದಿ ಒಪ್ಪಿಸುತ್ತಿದ್ದಾರೆ. ಎಲ್ಲಾ ಶಾಸಕರ ಸಂಪರ್ಕದಲ್ಲಿರುವಂತೆ ದಿನೇಶ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಬ್ಯಾಂಕ್ ಚುನಾವಣೆಯಲ್ಲಿ ಸೋತರೂ ಈಗ ಜಾರಕಿಹೊಳಿ ಸಹೋದರರು ಗೆಲುವಿನ ಆಟ ಮುಂದುವರೆಸಿದ್ದಾರೆ.

Leave a Comment