ಖರೀದಿಸಲು ನಾವೇನು ದನ, ಕುರಿಗಳಲ್ಲ

ಸಿದ್ದುಗೆ ಬಿಸಿ ತಿರುಗೇಟು
ಮೈಸೂರು. ಅ, 21- ನಮ್ಮನ್ನ ಖರೀದಿಸಲು ನಾವೇನು ದನ, ಕುರಿ, ಕೋಳಿಗಳಲ್ಲ. ಮಾರಾಟ, ಖರೀದಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಶಾಸಕರನ್ನು ದನ, ಕುರಿ, ಕೋಳಿಗಳಂತೆ ಬಿಜೆಪಿಯವರು ಖರೀದಿ ಮಾಡಿದ್ದಾರೆ ಎಂದು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿ ನಮ್ಮನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ಸಿದ್ದರಾಮಯ್ಯ ಅವರು ಒಮ್ಮೆ ಇತಿಹಾಸ ನೆನಪು ಮಾಡಿಕೊಡಲಿ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿದ್ದರೆ 14 ಮಂದಿ ಪಕ್ಷದಿಂದ ಹೊರಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಸಮನ್ವಯ ಸಮಿತಿ ಅಧ್ತಕ್ಷರಾಗಿ ಸಿದ್ದರಾಮಯ್ಯ ಅವರು ಎಲ್ಲರನ್ನು ಹೇಗೆ ನಡೆಸಿಕೊಂಡರು ಅನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಂತು ಕುಟುಂಬಕ್ಕೆ ಮಾತ್ರ ಸೀಮಿತರಾದರು. ಪಕ್ಷದಲ್ಲಿ ನಮ್ಮ ಕಷ್ಟ ಸುಖ ಕೇಳೋರೆ ದಿಕ್ಕಿರಲಿಲ್ಲ. ಹಾಗಾಗಿ ನಾವೆಲ್ಲ‌ ಧೃಡ ತೀರ್ಮಾನ ಮಾಡಬೇಕಾಯಿತು ಈಗಲೂ ಸಹ‌ ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ.‌ ಪರಿಸ್ಥಿತಿಯನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ನನಗೆ ಮಂತ್ರಿ ಸ್ಥಾನ ಕೈತಪ್ಪುವಂತೆ ಮಾಡಿದ್ರು. ಅನರ್ಹ ಶಾಸಕರು ಕಾಂಗ್ರೆಸ್ ಬಿಡಲು ಕಾರಣವೇನು ಅಂತಾ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಆರಂಭ ದಿನಗಳಲ್ಲಿ ನಮಗೆ ಆಸೆ ಆಮಿಷಗಳನ್ನ ಒಡ್ಡಿದ್ರು ನಾವು ಪಕ್ಷ ಬಿಟ್ಟಿರಲಿಲ್ಲ. ಆದ್ರೆ 1 ವರ್ಷ 2 ತಿಂಗಳು ಕಾದು ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮ ನಿರ್ಧಾರದ ಹಿಂದೆ ಸಮಗ್ರ ಕರ್ನಾಟಕದ ಅಭಿವೃದ್ದಿಯ ಹಿತ ಚಿಂತನೆ ಇದೆ. ಸಮ್ಮಿಶ್ರ ಸರ್ಕಾರದಿಂದ ಸಮಗ್ರ ಅಭಿವೃದ್ದಿ ಸಾಧ್ಯವಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ನಾವು ನಿರೀಕ್ಷಿಸಿದಂತೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ಸಿಗುತ್ತಿದೆ. ನನ್ನದೇ ಕ್ಷೇತ್ರಕ್ಕೆ ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಬಹು‌ ದಿನಗಳ ಕನಸಾಗಿದ್ದ ಏತ ನೀರಾವರಿ ಯೋಜನೆ ಜಾರಿಗೆ ಬರುತ್ತಿದೆ. ಉತ್ತರ ಕರ್ನಾಟಕ ಅಭಿವೃದ್ದಿ ಆಶಯ‌ ಕೂಡ ಈಡೇರುತ್ತಿದೆ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದರು.
ನಾಳೆ ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಹೊರ ಬೀಳುವ ವಿಶ್ವಾಸವಿದೆ. 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿಲುವು ಸಂವಿಧಾನ ಬಾಹಿರವಾದುದು ಎಂದು ಅವರು ಆರೋಪಿಸಿದರು.

Leave a Comment