ಕ.ವಿ.ವಿ.ಮಾಜಿ ಕುಲಸಚಿವರ ಮನೆ ಮೇಲೆ ಎಸಿಬಿ ದಾಳಿ

ಧಾರವಾಡ,ಜೂ 12- ಇಲ್ಲಿನ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಕಲ್ಲಪ್ಪ ಹೊಸಮನಿಯವರ ಮನೆ ಮೇಲೆ ಇಂದು ಬೆಳಿಗ್ಗೆ ಎ.ಸಿ.ಬಿ.ದಾಳಿ ನಡೆದಿದೆ.
ಬೆಳ್ಳಂಬೆಳಿಗ್ಗೆ ಧಾರವಾಡದ ಶ್ರೀನಗರದಲ್ಲಿರುವ ಅವರ ಮನೆ ಹಾಗೂ ಧಾರವಾಡ ತಾಲೂಕ ತಲವಾಯಿ ಗ್ರಾಮದಲ್ಲಿರುವ ಎರಡು ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿತು.
ಭ್ರಷ್ಟಾಚಾರ ನಿಗ್ರಹ ದಳದ ಡಿ.ವೈ.ಎಸ್.ಪಿ.ವಿಜಯಕುಮಾರ ಬಿಸನಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಮಹತ್ವದ ದಾಖಲೆಗಳ ಪರಿಶೀಲನೆ ನಡೆಯಿತು.
ಕಳೆದ ಆರು ತಿಂಗಳ ಹಿಂದಷ್ಟೇ ಹೊಸಮನಿಯವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಸ್ಥಾನದಿಂದ ಕೆಳಗಿಳಿಸಿ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.
ಪಿ.ಹೆಚ್.ಡಿ.ವಿದ್ಯಾರ್ಥಿಗಳಿಂದ ಹಣ ಪಡೆದು ಭ್ರಷ್ಟಾಚಾರ ನಡೆಸಿದ ಹಾಗೂ ಲೈಂಗಿಕ ಕಿರುಕುಳದ ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದವು.
ಈ ಕುರಿತಂತೆ ಕ.ವಿ.ವಿ. ಆವರಣದಲ್ಲಿ ಅವರ ಪರ ಹಾಗೂ ವಿರುದ್ಧ ಪ್ರತಿಭಟನೆಗಳು ನಡೆದ ಪ್ರಕರಣ ರಾಜಕೀಯದ ಬಣ್ಣ ಪಡೆದಿತ್ತು.
ಈ ಎಲ್ಲದರಿಂದ ಮುಜುಗರಕ್ಕೀಡಾಗಿದ್ದ ರಾಜ್ಯ ಸರ್ಕಾರ ಅವರನ್ನು ಕುಲಸಚಿವ ಸ್ಥಾನದಿಂದ ಕೆಳಗಿಳಿಸಿತ್ತು. ಎಸಿಬಿ ಅಧಿಕಾರಿಗಳ ದಾಳಿಯಿಂದ ಹೊಸಮನಿಯವರ ಮನೆಯಲ್ಲಿ ಯಾವ ದಾಖಲೆಗಳು ಸಿಕ್ಕಿವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Leave a Comment