ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಬಿಎಸ್ಪಿ ಬೆಂಬಲಿಸಿ

ಬಳ್ಳಾರಿ, ಏ.19: ಈ ವರೆಗೆ ಬಳ್ಳಾರಿ- ಕ್ಷೇತ್ರದಿಂದ ಆಯ್ಕೆಯಾದ ಸಂಸದರು ಇಲ್ಲಿನ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಗಮನ ಸೆಳೆದು ಅವುಗಳ ಪರಿಹಾರದ ಪ್ರಯತ್ನ ಮಾಡಿಲ್ಲ. ಅದಕ್ಕಾಗಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಈ ಬಾರಿ ಬಿ.ಎಸ್.ಪಿ ಅಭ್ಯರ್ಥಿಗೆ ಮತ ನೀಡಿ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಡಿ.ಬಸವರಾಜ್ ಹೇಳಿದ್ದಾರೆ.

ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ನೆನೆಗುದಿಗೆ ಬಿದ್ದಿರುವ ತುಂಗಭದ್ರ ಜಲಾಶಯದ ಹೂಳೆತ್ತುವುದು, ನಗರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಂದಾಗಿರುವ ಸ್ಕ್ಯಾನಿಂಗ್, ಸಿಮೆಂಟ್ ಹಾಗೂ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಇಲ್ಲಿನ ಸಂಸದರಾರು ಈ ವರೆಗೆ ಸರಿಯಾದ ಪ್ರಯತ್ನವೇ ಮಾಡಿಲ್ಲ ಎಂದ ಅವರು, ತುಂಗಭದ್ರ ಜಲಾಶಯದಿಂದ ನಿಗಧಿತ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ಜಿಂದಾಲ್ ಕಾರ್ಖಾನೆಯವರು ಪಡೆದರೂ ಕಾಂಗ್ರೆಸ್ ನವರು ಕಣ್ಣು ಮುಚ್ಚಿ ಕುಳಿತಿದ್ದಾರೆ, ನೆಮ್ಮದಿಗಾಗಿ ಕಾಂಗ್ರೆಸ್ ಗೆ ಮತ ಕೊಡಿ ಎನ್ನುವ ಅವರು, ಅವರ ಆಡಳಿತ ಅವಧಿಯಲ್ಲಿ ನೆಮ್ಮದಿ ಇತ್ತಾ ಎಂದು ಪ್ರಶ್ನಿಸಿದರು.

ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೂರ ಇಟ್ಟು ಬಿಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸಲು ಜಿಲ್ಲೆಯ ಜನತೆ ಮುಂದಾಗಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಕೆ.ಗೂಳಪ್ಪ, ಪಕ್ಷದ ಜಿಲ್ಲಾ ಅಧ್ಯಕ್ಷ ಜೆ.ಜಗನ್ನಾಥ, ಮುಖಂಡರುಗಳಾದ ಸೂರ್ಯಕಾಂತ ನಿಂಬಾಳ್ಕರ್, ಚಿದಾನಂದ, ಲಕ್ಷ್ಮಣ, ಮಲ್ಲಿಕಾರ್ಜುನ ಮೊದಲಾದವರು ಇದ್ದರು.

Leave a Comment