ಕ್ಷುದ್ರಗ್ರಹಗಳ ಅತಿ ಹಳೆ ಕುಟುಂಬ ಪತ್ತೆ

ಅತಿ ಪುರಾತನ ಕ್ಷುದ್ರಗ್ರಹಗಳ ಕುಟುಂಬವನ್ನು ಖಗೋಳ ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ. ಆಸ್ಟಿರಾಯಿಡ್ ಬೆಲ್ಟ್‌ನ ಕೇಂದ್ರ ಭಾಗದವರೆಗೂ ವ್ಯಾಪಿಸಿರುವ ಈ ಪುರಾತನ ಕುಟುಂಬಕ್ಕೆ ಇನ್ನೂ ಹೆಸರು ಇಟ್ಟಿಲ್ಲ. ಕಾರಣ ಈ ಕುಟುಂಬದ ಮುಖ್ಯ ಸದಸ್ಯ (ಪೇರೆಂಟ್ ಬಾಡಿ) ಯಾರು ಎಂಬುವುದರ ಬಗ್ಗೆ ಸ್ಪಷ್ಟತೆ ಸಿಗದೆ ಇರುವುದು ಎಂದು ಅಮೆರಿಕಾದ ಸೌತ್ ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಖಗೋಳ ವಿಜ್ಞಾನಿ ಕೆವಿನ್ ವಾಲ್ಫ್ ಹೇಳಿದ್ದಾರೆ. ಆಸ್ಟಿರಾಯಿಡ್ ಬೆಲ್ಟ್ ಎಲ್ಲಿಯೂ ಆಸ್ಟಿರಾಯಿಡ್ ಕುಟುಂಬಗಳನ್ನು ಗುರುತಿಸುವಾಗ ಯಾವ ಕ್ಷುದ್ರಗ್ರಹಗಳು ಪರಸ್ಪರ ಡಿಕ್ಕಿಯ ಸಂದರ್ಭದಲ್ಲಿ ರೂಪಗೊಂಡವು, ಯಾವುವು ಮೂಲದಲ್ಲಿದ್ದ ಕ್ಷುದ್ರಗ್ರಹಗಳು ಎಂಬುದನ್ನು ಗುರುತಿಸಲು ಸಾಧ್ಯ ಎಂದೂ ವಾಲ್ಫ್ ಹೇಳಿದ್ದಾರೆ.

ಖಗೋಳ ವಿಜ್ಞಾನಿಗಳು ಇತ್ತೀಚೆಗೆ ಕ್ಷುದ್ರಗ್ರಹಗಳ ಅತಿಪುರಾತನ ಕುಟುಂಬವನ್ನು ಪತ್ತೆ ಹಚ್ಚಿದ್ದಾರೆ.

ಮಂಗಳ ಮತ್ತು ಗುರುಗ್ರಹಗಳ ಮಧ್ಯಭಾಗದಲ್ಲಿ ಬಹುವಿಸ್ತಾರವಾಗಿ ಹಬ್ಬಿಕೊಂಡಿರುವ ಈ ಗ್ರಹಗಳ ನೆಲೆಯನ್ನು ಆಸ್ಮಿಕಾಯಿಡ್ ಬೆಲ್ಟ್ ಎಂದು ಕರೆಯಲಾಗುತ್ತದೆ.

ಸೂರ್ಯನಿಂದ ಸರಿಸುಮಾರು 350 ದಶಲಕ್ಷ ಕಿ.ಮೀ. ದೂರದಲ್ಲಿರುವ ಈ ಆಸ್ಟಿರಾಯಿಡ್ಸ್ ಬೆಲ್ಟ್‌ನಲ್ಲಿ ಲಕ್ಷ ಲಕ್ಷ ಆಸ್ಟಿರಾಯಿಡ್ ಕುಟುಂಬಗಳಿವೆ.

ಇವುಗಳ ಅಧ್ಯಯನದಿಂದ ಸೌರಮಂಡಲದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಪಡೆಯಬಹುದು ಎಂದು ಅತ್ಯಂತ ಹಳೆಯ ಆಸ್ಟಿರಾಯಿಡ್ ಕುಟುಂಬವನ್ನು ಪತ್ತೆ ಹಚ್ಚಿರುವ ಅಧ್ಯಯನ ತಂಡ ಹೇಳಿದೆ.

ತುಂಬಾ ಹಳೆಯದು

ಈಗ ಪತ್ತೆ ಹಚ್ಚಿದ ಕ್ಷುದ್ರಗ್ರಹಗಳ ಕುಟುಂಬ ತುಂಬಾ ಹಳೆಯದಾಗಿದ್ದು ಇದು 4 ಶತಕೋಟಿ ವರ್ಷಗಳ ಹಿಂದೆ ರಚನೆಯಾಗಿದೆ ಎಂದು ಅಂದಾಜಿಸಲಾಗಿದೆ.

ಈ ಕುಟುಂಬಗಳ ಅಧ್ಯಯನದಿಂದ ಆಸ್ಟಿರಾಯಿಡ್ ಬೆಲ್ಟ್‌ನ ಇತಿಹಾಸ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದೂ ಅಧ್ಯಯನ ತಂಡ ಹೇಳಿದೆ.

ಪುರಾತನ ಕ್ಷುದ್ರಗ್ರಹಗಳ ಕುಟುಂಬ ಪತ್ತೆ ಮಾಡಿರುವ ಅಧ್ಯಯನ ತಂಡದ ವರದಿ ಸೈನ್ಸ್ ಜನರಲ್‌ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಹಲವು ಶತಕೋಟಿ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕ್ಷುದ್ರಗ್ರಹ ಕುಟುಂಬಗಳ ಅಧ್ಯಯನ ಖಗೋಳ ವಿಜ್ಞಾನಿಗಳಿಗೆ ಸವಾಲಿನ ಪ್ರಶ್ನೆಯೂ ಹೌದು. ಕಾರಣ ಕಾಲಘಟ್ಟದಲ್ಲಿ ಈ ಕುಟುಂಬಗಳು ಮೂಲಸ್ಥಾನದಿಂದ ಚದುರಿ ಹೋಗಿರುವುದು. ಹೀಗೆ ಚದುರಿ ಹೋಗುವಾಗ ಚಿಕ್ಕ ಗಾತ್ರದ ಕ್ಷುದ್ರಗ್ರಹಗಳು ಬಹುವೇಗದಲ್ಲಿ ಹಾಗೂ ದೊಡ್ಡ ಗಾತ್ರದವು ಅತಿ ನಿಧಾನವಾಗಿ ಚದುರಿಹೋಗುತ್ತವೆ.

ಒಟ್ಟುಗೂಡಲು ಸಾಧ್ಯವಾಗಿಲ್ಲ

ಸಣ್ಣ ಸಣ್ಣ ಗ್ರಹಗಳೇ ಕ್ಷುದ್ರಗ್ರಹಗಳು. ಗುರು ಮತ್ತು ಮಂಗಳ ಗ್ರಹಗಳ ಮಧ್ಯದಲ್ಲಿ ಅತಿದೊಡ್ಡ ವಿಸ್ತಾರದಲ್ಲಿ ಈ ಕ್ಷುದ್ರಗ್ರಹಗಳು ಒತ್ತಾಗಿ ಹರಡಿಕೊಂಡಿದ್ದು, ಇದನ್ನು ಆಸ್ಟಿರಾಯಿಡ್ ಬೆಲ್ಟ್ ಎನ್ನಲಾಗಿದೆ. ಇದರಲ್ಲಿ ಸರಿಸುಮಾರು 10,000ಕ್ಕೂ ಹೆಚ್ಚು ಕ್ಷುದ್ರಗ್ರಹಗಳಿದ್ದು, ಅವು ಆಕಾರ, ಗಾತ್ರಗಳಲ್ಲಿ ಭಿನ್ನಭಿನ್ನವಾಗಿವೆ. ಇವೆಲ್ಲಾ ಒಂದಾಗಿ ಒಂದು ದೊಡ್ಡ ಗ್ರಹವಾಗಿ ರೂಪುಗೊಳ್ಳಬಹುದು. ಆದರೆ ಅದಕ್ಕೆ ಗುರುಗ್ರಹದ ಗುರುತ್ವಾಕರ್ಷಣೆ ಅವಕಾಶ ನೀಡುತ್ತಿಲ್ಲ.

ಗುರುತ್ವಾಕರ್ಷಣೆಯಿಂದಲೇ ಇವು ತಮ್ಮ ನೆಲೆ ಆಸ್ಟಿರಾಯಿಡ್ ಬೆಲ್ಟ್‌ನಿಂದ ಹೊರಕ್ಕೆ ಚದುರಿಹೋಗುತ್ತವೆ.

ಕ್ಷುದ್ರಗ್ರಹಗಳ ಕುಟುಂಬಗಳ ಅಧ್ಯಯನ ನಡೆಸುವುದರಿಂದ ಸೌರಮಂಡಲದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಬರುತ್ತದೆ ಎಂದೂ ಅಧ್ಯಯನ ತಂಡದ ವಿಜ್ಞಾನಿಗಳು ಹೇಳಿದ್ದಾರೆ.

– ಉತ್ತನೂರು ವೆಂಕಟೇಶ್

Leave a Comment