ಕ್ರೌರ್ಯದ ಅಟ್ಟಹಾಸ

ಚಿತ್ರ: ೨
ನಿರ್ದೇಶನ: ಶ್ರೀನಿವಾಸ ರಾಜು
ತಾರಾಗಣ: ಪೂಜಾಗಾಂಧಿ, ರವಿಶಂಕರ್, ಶೃತಿ, ಮಕರಂದ್ ದೇಶಪಾಂಡೆ, ರವಿಕಾಳೆ, ಸಂಜನಾ, ಮುನಿ, ಕರಿ ಸುಬ್ಬು,ಅವಿನಾಶ್,ಪೆಟ್ರೋಲ್ ಪ್ರಸನ್ನ, ಜಯದೇವ್,ಸತ್ಯಜಿತ್ ಮತ್ತಿತರರು
ರೇಟಿಂಗ್: *

’ಮನುಷ್ಯ ಮೃಗ ಆಗಲು ನಿನ್ನಂಥವನೊಬ್ಬ ಸಾಕು’..
ಗ್ಯಾಂಗ್‌ನ ಸದಸ್ಯರ ಕಣ್ಣ ಮುಂದೆ ಕೆಂಚಿ (ಪೂಜಾಗಾಂಧಿ) ಪೊಲೀಸರಿಂದಲೇ ಅಮಾನವೀಯವಾಗಿ ಅತ್ಯಾಚಾರಕ್ಕೆ ಒಳಗಾದಾಗ ಗ್ಯಾಂಗ್‌ನ ಸದಸ್ಯನೊಬ್ಬ ಅತ್ಯಾಚಾರಿ ಪೊಲೀಸ್‌ಗೆ ಹೇಳುವ ಮಾತು ವಾಸ್ತವತೆಗೆ ಕನ್ನಡಿ ಹಿಡಿದಂತಿದೆ.
ಸಂಭಾಷಣೆ ತೆರೆಯ ಮೇಲೆ ಬರುತ್ತಿದ್ದಂತೆ ಮುಂದಿನದನ್ನು ಮುಂದಿನ ಭಾಗದಲ್ಲಿ ನೋಡಿ ಎಂದು ಇದ್ದಕ್ಕಿಂದ್ದಂತೆ ಚಿತ್ರ ಅಂತ್ಯವಾಗಿ ಬಿಡುತ್ತದೆ. ಚಿತ್ರದಲ್ಲಿ ಕ್ರೌರ್ಯದ ಅಟ್ಟಹಾಸ ವಿಭೃಂಬಿಸಿದೆ.
ನಿರ್ದೇಶಕ ಶ್ರೀನಿವಾಸ ರಾಜು ಅವರಿಗೆ ಬಾಹುಬಲಿ ಮೊದಲ ಭಾಗ ಸ್ಪೂರ್ತಿಯಾದಂತೆ ಇದೆ. ಬಾಹುಬಲಿಗೂ ದಂಡುಪಾಳ್ಯದ ಮುಂದುವರಿದ ಭಾಗ ’೨’ಗೂ ಹೋಲಿಕೆ ಅಸಾಧ್ಯ ಎನ್ನುವುದು ಬೇರೆ ಮಾತು.
ಒಂದಷ್ಟು ಕೊಲೆ,ಅತ್ಯಾಚಾರ, ರಕ್ತ ಸಿಕ್ತ ಅಧ್ಯಾಯದ ರಕ್ತ ಚರಿತೆಯನ್ನು ತೆರೆಯ ಮೇಲೆ ತಂದರೆ ಜನ ನೋಡಿ ಬಿಡುತ್ತಾರೆ ಎನ್ನುವ ನಂಬಿಕೆ ಇದ್ದಂತಿದೆ. ದಂಡುಪಾಳ್ಯದಲ್ಲಿ ಗ್ಯಾಂಗ್‌ನ ಸದಸ್ಯರ ಕೊಲೆ,ಅತ್ಯಾಚಾರವನ್ನು ವಿಜೃಂಬಿಸಿದ್ದ ನಿರ್ದೇಶಕರು ’೨’ನಲ್ಲಿ ತದ್ವಿರುದ್ಧ. ಪೊಲೀಸರ ಕ್ರೌರ್ಯ,ಅಮಾನವೀಯತೆ, ಅತ್ಯಾಚಾರವನ್ನು ತೆರೆಯ ಮೇಲೆ ತಂದಿದ್ದಾರೆ. ಕೆಲವೊಂದು ಸನ್ನಿವೇಶಗಳಲ್ಲಿ ಸಂಭಾಷಣೆಗಳು ಸಭ್ಯತೆಯ ಎಲ್ಲೆಯನ್ನು ಮೀರಿವೆ. ಇಂತಹುದಕ್ಕೆ ಸೆನ್ಸಾರ್ ಮಂಡಳಿ ಹೇಗೆ ಅನುಮತಿ ನೀಡಿತು ಎನ್ನುವುದು ಪ್ರಶ್ನಾರ್ಥಕ.
ಐದು ವರ್ಷಗಳ ಕಾಲ ವಿಚಾರಣೆ ನಡೆದು ಗಲ್ಲು ಶಿಕ್ಷೆಗೆ ಒಳಗಾದ ಗ್ಯಾಂಗ್‌ನ ಸದಸ್ಯರನ್ನು ಜೈಲಿಲ್ಲಿಡುವ ವಿಷಯವನ್ನು ಜಗ್ಗಾಡಿದ್ದಾರೆ. ಪೊಲೀಸರ ಕುತಂತ್ರದಿಂಲೇ ಗಲ್ಲು ಶಿಕ್ಷೆಗೆ ಒಳಗಾಗಿದವರು. ಎಲ್ಲರೂ ಅಮಾಯಕರು ಎನ್ನುವ ರೀತಿ ಬಿಂಬಿಸಿದ್ದಾರೆ.
ಗಲ್ಲುಶಿಕ್ಷೆಗೆ ಒಳಗಾದ ಗ್ಯಾಂಗ್‌ನ ಸದಸ್ಯರು ಅಮಾಯಕರು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಶಿಕ್ಷೆ ಅನುಭವಿಸುವಂತಾಗಿದೆ ಎನ್ನುವುದನ್ನು ಪತ್ತೆ ಮಾಡಲು ಅಪರಾಧ ವರದಿಗಾರ್ತಿ ಅಭಿವ್ಯಕ್ತಿ (ಶೃತಿ) ಮುಂದಾಗುತ್ತಾರೆ. ಇದಕ್ಕೆ ಪೊಲೀಸರಿಂದಲೇ ಅಡೆ ತಡೆ. ಎಲ್ಲವನ್ನೂ ಮೆಟ್ಟಿನಿಂತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಗೆ ಸ್ಥಳಾಂತರಗೊಂಡ ಖೈದಿಗಳನ್ನು ಭೇಟಿಯಾದ ಸಂದರ್ಭ. ಅಲ್ಲಿಂದ ಮುಂದಿನದು ದಂಡುಪಾಳ್ಯ ಗ್ಯಾಂಗ್‌ನ ಕಥೆಯ ಅನಾವರಣ.
ಜೈಲಿನಲ್ಲಿ ಖೈದಿಗಳ ವರ್ತನೆ, ಅದರಲ್ಲಿಯೂ ಮಹಿಳಾ ಖೈದಿಗಳ ಲಿಪ್‌ಲಾಕ್, ಕೆಲ ಸಂಭಾಷಣೆಗಳು ಹಸಿ ಬಿಸಿ ಸನ್ನಿವೇಶಕ್ಕೆ ಕನ್ನಡಿ ಹಿಡಿದಿದೆ.
ಡಿ ಗ್ಯಾಂಗ್‌ನಲ್ಲಿ ೧೧ ಮಂದಿ ಇದ್ದರೂ ಪೂಜಾಗಾಂಧಿ, ಕಣ್ಣುಗಳಿಂದಲೇ ಅಭಿನಯಿಸಿದ್ದಾರೆ.ಕೆಲವು ಸನ್ನಿವೇಶದಲ್ಲಿ ದೇಹದ ಆಂಗಿಕ ಭಾಷೆಯಿಂದ ನಡುಕ ಹುಟ್ಟಿಸಿದ್ದಾರೆ. ಜಯದೇವ್ ಸೇರಿದಂತೆ ಕೆಲವರು ಮಾತ್ರ ಗಮನ ಸೆಳೆಯುತ್ತಾರೆ ಇನ್ನುಳಿದಂತೆ ನಟಿ ಸಂಜನಾ ಸೇರಿದಂತೆ ಎಲ್ಲರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.
ಎಂದಿನಂತೆ ರವಿಶಂಕರ್ ಅಬ್ಬರಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಹಿರಿಯ ಕಲಾವಿದರಾದ ಶೃತಿ,ಸತ್ಯಜಿತ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರ ಕ್ರೌರ್ಯ ಮತ್ತು ಅಮಾನವೀಯತೆಯ ಅಟ್ಟಹಾಸ ಮೆರದಿದೆ.
-ಚಿಕ್ಕನೆಟಕುಂಟೆ.ಜಿ ರಮೇಶ್

Leave a Comment