“ಕ್ರೇಜಿ ಕರ್ನಲ್” ಮತ್ತೆ ಬರ್ತಿದ್ದಾರೆ, ನಗೋಕೆ ಸಿದ್ಧರಾಗಿ

ಬೆಂಗಳೂರು, ಏ 22 – “ಕ್ರೇಜಿ ಕರ್ನಲ್‍” ನೆನಪಿದೆಯಲ್ವಾ? ಹೆ ಹ್ಹೇ ಹ ಹ್ಹಾ ಎನ್ನುತ್ತಾ ನಗಿಸಿದ ಧಾರಾವಾಹಿಯನ್ನು ಮರೆಯೋಕೆ ಸಾಧ್ಯವೇ ಇಲ್ಲ.

ಕಳೆದ 30 ವರ್ಷಗಳ ಹಿಂದೆ ದೂರದರ್ಶನದಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುತ್ತ ಜನರನ್ನು ಸೆಳೆದಿದ್ದಲ್ಲದೆ, 8 ಬಾರಿ ಮರು ಪ್ರಸಾರಗೊಂಡ ಹಗ್ಗಳಿಕೆ ಹೊಂದಿರುವ ಈ ಧಾರಾವಾಹಿ ಮತ್ತೆ ನಿಮ್ಮನ್ನು ನಗಿಸಲು ಬರುತ್ತಿದೆ.

ರಮೇಶ್‍ ಭಟ್, ಗಿರಿಜಾ ಲೋಕೇಶ್ ಜೀವ ತುಂಬಿ ನಟಿಸಿರುವ ಈ ಧಾರಾವಾಹಿ, ಬೆಂಗಳೂರು ದೂರದರ್ಶನದಲ್ಲಿ ಇದೇ 25 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 11.30ಕ್ಕೆ ಮರುಪ್ರಸಾರವಾಗಲಿದೆ ಎಂದು ದೂರದರ್ಶನದ ಪ್ರಕಟಣೆ ತಿಳಿಸಿದೆ.

“ಕ್ರೇಜಿ ಕರ್ನಲ್” ದೂರದರ್ಶನದ ಪ್ರತಿಷ್ಠಿತ “ಚಂದನ ಪ್ರಶಸ್ತಿ”ಮುಡಿಗೇರಿಸಿಕೊಂಡ ಮೊದಲ ಧಾರಾವಾಹಿ. ಮುಂಬೈ ದೂರದರ್ಶನದಿಂದಲೂ ಪ್ರಸಾರವಾಗಿ ಅಲ್ಲಿನ ಕನ್ನಡಿಗರ ಮನಸ್ಸನ್ನೂ ಗೆದ್ದಿದೆ.

ಪ್ರೇಮಕಲಾ ವಿಷನ್ಸ್ ಅವರ ಹೆಮ್ಮೆಯ ಕಾಣಿಕೆಯಾಗಿದ್ದು, ಎಸ್‍ ಎಸ್‍ ರಾಜೇಶ್ ನಿರ್ಮಾಣ, ಆರ್ ಸಿ ಮಾಪಾಕ್ಷಿ ಛಾಯಾಗ್ರಹಣ, ರವಿಶೆಣೈ ಸಂಗೀತವಿದೆ. ಶೀರ್ಷಿಕೆ ಗೀತೆಯನ್ನು ಡಾ. ದೊಡ್ಡರಂಗೇಗೌಡ ಬರೆದಿದ್ದು, ಲಿಂಗರಾಜ್ ನಿರ್ದೇಶಿಸಿದ್ದಾರೆ.

ರಮೇಶ್ ಭಟ್, ಗಿರಿಜಾ ಲೋಕೇಶ್ ಅವರಲ್ಲದೆ, ಇಂದು ಖ್ಯಾತನಾಮರಾಗಿರುವ ಹಲವು ನಟರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ನಗಿಸಲು ಬರುತ್ತಿರುವ “ಕ್ರೇಜಿ ಕರ್ನಲ್” ಧಾರಾವಾಹಿಯನ್ನು ಸ್ವಾಗತಿಸೋಕೆ ಸಿದ್ಧರಾಗಿ, ಬೇಸರ ಕಳೆದುಕೊಳ್ಳಿ.

Leave a Comment