ಕ್ರೀಡೆ-ಯೋಗ ಒಂದೇ ನಾಣ್ಯದ ಎರಡು ಮುಖಗಳು

ತಿಪಟೂರು, ಸೆ. ೧೪- ಕ್ರೀಡೆ ಮತ್ತು ಯೋಗ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಕ್ರೀಡೆಯು ಚಿಂತೆ ಮತ್ತು ಸಂಕುಚಿತ ಮನೋಭಾವನೆಯನ್ನು ದೂರಗೊಳಿಸಿ ಆತ್ಮಸ್ಥೈರ್ಯವನ್ನು ಬೆಳೆಸಿದರೆ, ಯೋಗವು ಸುಸ್ಥಿರ ಆರೋಗ್ಯವನ್ನು ಕೊಡುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ವಿಭಾಗದ ಸಂಚಾಲಕರಾದ ಎನ್. ಚನ್ನಬಸಪ್ಪ ಹೇಳಿದರು.

ನಗರದ ಕಲ್ಪತರು ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದಿನ ಭಾರತೀಯರಾದ ನಾವು ಅವಿಸ್ಮರಣೀಯ ದಿನವೆಂದು ಪರಿಗಣಿಸಲಾಗಿದೆ. ಏಕೆಂದರೆ ಅಪ್ರತಿಮ ಕ್ರೀಡಾಪಟು ಮೇಜರ್ ಧ್ಯಾನ್‍ಚಂದ್‍ರವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನ ಎಂದು ಘೋಷಿಸಲಾಗಿದೆ ಎಂದರು.

ಯೋಗ ಮತ್ತು ಕ್ರೀಡೆ ಮನುಷ್ಯನಿಗೆ ಅತ್ಯವಶ್ಯಕವಾಗಿದ್ದು, ಕ್ರೀಡೆಯಿಂದ ಕ್ರಿಯಾಶೀಲತೆ, ಹಸನ್ಮುಖಿ ಗುಣಗಳು ಹಾಗೂ ಸಂಸ್ಕೃತಿ, ಸಹಬಾಳ್ವೆ, ಏಕಾಗ್ರತೆಯನ್ನು ಬೆಳೆಸುತ್ತದೆ. ಕ್ರೀಡೆ ಕೇವಲ ದೈಹಿಕ ಆರೋಗ್ಯ ನೀಡದೆ ಬುದ್ದಿಶಕ್ತಿಯನ್ನು ವೃದ್ದಿಸುತ್ತದೆ. ಇದರ ಜತೆಗೆ ಯೋಗಭ್ಯಾಸವೂ ಅವಶ್ಯಕವಾಗಿದ್ದು, ಪ್ರತಿ ದಿನ ಕನಿಷ್ಠ 2 ಗಂಟೆಯಾದರೂ ಅಭ್ಯಾಸ ಮಾಡುವುದನ್ನು ಬೆಳೆಸಿಕೊಳ್ಳಬೇಕು ಎಂದರು.

ಕೆಐಟಿ ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿ, ಕ್ರೀಡೆ ಮತ್ತು ಯೋಗ ನಮ್ಮ ಬದುಕಿನ ಒಂದು ಭಾಗವಾಗಿದ್ದು, ಇವುಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ಪದ್ಮಾಸನ ಮತ್ತು ವಜ್ರಾಸನದ ಅಭ್ಯಾಸದಿಂದ ಮನಸ್ಸು ಸಾಮಾನ್ಯ ಚಿತ್ತದಂತೆ ವರ್ತಿಸುತ್ತದೆ. ಸಾಮಾನ್ಯ ಕಾಯಿಲೆಗಳನ್ನು ಹತೋಟಿಗೆ ತರಬಹುದಲ್ಲದೆ ಏಕಾಗ್ರತೆ ವೃದ್ದಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆವಿಎಸ್ ಕಾರ್ಯದರ್ಶಿ ಕೆ.ಪಿ. ರುದ್ರಮುನಿಸ್ವಾಮಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ. ಮುಂದೆ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಹ ಛಲ ಬೆಳೆಯುತ್ತದೆ.. ಅಲ್ಲದೆ ಕ್ರೀಡೆಯಷ್ಟೇ ಯೋಗವೂ ಪ್ರಾಮುಖ್ಯತೆ ಪಡೆದುಕೊಂಡಿದ್ದು,, ಯೋಗ ಮತ್ತು ಕ್ರೀಡೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೀಡೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಎಸ್.ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಮತ್ತು ಕಲ್ಪತರು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಎ.ಎಂ. ರಾಜಶೇಖರಯ್ಯ, ಜಯಂತ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment