ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ಸಾಹದಿಂದ ಜೀವಿಸಿ : ನಾಗೇಶ ಬಿಲ್ವಾ

ಬಳ್ಳಾರಿ, ಸೆ.14: ಹಿರಿಯ ನಾಗರಿಕರು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಭಾಗವಹಿಸುವುದರಿಂದ ಉತ್ಸಾಹದಿಂದ ಜೀವಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗೇಶ್ ಬಿಲ್ವಾ ಅವರು ಹೇಳಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ನಗರದ ಮುನಿಷಿಪಲ್ ಹೈಸ್ಕೂಲ್ ಮೂದಾನದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿರಿಯ ನಾಗರಿಕರು ಈ ರೀತಿಯ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರು ತಮ್ಮ ಬಾಲ್ಯದಲ್ಲಿನ ಜೀವನದ ಸಂತಸದ ಘಟನೆಗಳನ್ನು ನೆನಪಿಸಿಕೊಂಡು ಇನ್ನಷ್ಟು ಉತ್ಸಾಹದಿಂದ ಜೀವಿಸಲು ಸಾಧ್ಯವಾಗುತ್ತದೆ ಎಂದರು.

ಇಂದಿನ ಮಕ್ಕಳು ತಮ್ಮ ತಂದೆ-ತಾಯಿರೊಂದಿಗೆ ಲವಲವಿಕೆಯಿಂದ ಇರಬೇಕು. ಹಿರಿಯರು ದೈಹಿಕವಾಗಿ ಸದೃಢರಾಗಬೇಕು. ನಮಗೆ ವಯಸ್ಸಾಯಿತು ಎಂಬ ಭಾವನೆ ಬಿಟ್ಟು ಜೀವಿಸಬೇಕು. ತಂದೆ-ತಾಯಿಗೆ ಮಕ್ಕಳು ಮೋಸ ಮಾಡಿದಲ್ಲಿ ಇಲಾಖೆಗೆ ಅರ್ಜಿ ಸಲ್ಲಿಸಿ ಪೊಲೀಸ್, ವಕೀಲರ ಮುಖಾಂತರ ಅವರಿಗೆ ತಿಳುವಳಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕ ಕಲ್ಯಾಣದಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದರು. ನಗರ ಡಿ.ವೈ.ಎಸ್.ಪಿ ಉಮೇಶ್ ಈಶ್ವರ್ ನಾಯ್ಕ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ನಮ್ಮ ಸಂಸ್ಕೃತಿಗೆ ತಕ್ಕಂತೆ ಬೆಳಸಬೇಕು. ಮನೆಯಲ್ಲಿರುವ ಹಿರಿಯರನ್ನು ಸ್ವಯಂ ಪ್ರೇರಣೆಯಿಂದ ಗೌರವಿಸಬೇಕು. ಸಮಾಜದಲ್ಲಿ ಹಿರಿಯರನ್ನು ಅರ್ಥ ಮಾಡಿಕೊಳ್ಳುವುದರೊಂದಿಗೆ ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಸುವುದರ ಅಗತ್ಯ ಇದೆ ಎಂದರು.

ಕುರುಗೋಡಿನ ಸ್ಮೈಯಿಲ್ ಸಂಸ್ಥೆಯ ಕಾರ್ಯದರ್ಶಿ ಉಮಾಪಂಪಾಪತಿ ಗೌಡ. ಹಿರಿಯರಾದ ಸೀತಮ್ಮ, ಮುತ್ಯಾಲಪ್ಪ ವೇದಿಕೆಯಲ್ಲಿದ್ದರು ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿದ್ದರು.

 

Leave a Comment