ಕ್ರೀಡಾಕೂಟ : ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ : ಪೊಲೀಸ್ ತಂಡ ವಿರುದ್ಧ ಪತ್ರಕರ್ತರ ತಂಡಕ್ಕೆ ಜಯ

ರಾಯಚೂರು.ಡಿ.05- ಜಿಲ್ಲಾ ಪತ್ರಕರ್ತರ ತಂಡವೂ ಪೊಲೀಸ್ ತಂಡ ವಿರುದ್ಧ ಭರ್ಜರಿ ಜಯ ದಾಖಲಿಸಿತು.

ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಕ್ರೀಡಾಕೂಟ ನಿಮಿತ್ಯ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡವೂ ಪೊಲೀಸ್ ತಂಡವನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿತು. ಮೊದಲಿಗೆ ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ದುಕೊಂಡ ಪೊಲೀಸ್ ತಂಡ ನಿಗದಿತ 10 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತು.

ಪೊಲೀಸ್ ತಂಡ ಪರ ಶಶಿಧರ ಉತ್ತಮ ಆಟ ಆಡುವ ಮೂಲಕ ರನ್ ಗಳಿಸಲು ಸಾಧ್ಯವಾಯಿತು. ನಂತರ ಈ ಮೊತ್ತದ ಬೆನ್ನತ್ತಿದ ಪತ್ರಕರ್ತರ ತಂಡ 9.1 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 70 ರನ್ ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿತು. ಆರಂಭದಲ್ಲಿ ಮುತ್ತಣ್ಣ, ಶ್ರೀನಿವಾಸ ಉತ್ತಮ ರನ್ ಗಳಿಸಲು ನೆರವಾದರು. ನಂತರ ಸಿದ್ದಯ್ಯ ಸ್ವಾಮಿ, ನೀಲಕಂಠ ಸ್ವಾಮಿ ತಂಡದ ಮೊತ್ತ ಹೆಚ್ಚಿಸಿದರು.

ಪೊಲೀಸ್ ತಂಡ ಪರ ಶಶಿಧರ 30 ರನ್, ಮುದ್ದು ರಂಗಸ್ವಾಮಿ 11 ರನ್ ಗಳಿಸಿದ್ದರು. ಪತ್ರಕರ್ತರ ತಂಡ ಪರ ಮುತ್ತಣ್ಣ ಅವರು 2 ಓವರ್‌ಗಳಲ್ಲಿ 2 ವಿಕೆಟ್ ಪಡೆದರು. ಶ್ರೀನಿವಾಸ 2 ವಿಕೆಟ್ ಪಡೆದರೇ, ದುರ್ಗೇಶ ಮತ್ತು ಶರಣು ಹಿರೇಮಠ ತಲಾ 1 ವಿಕೆಟ್ ಪಡೆದು ಪೊಲೀಸ್ ತಂಡ ವಿರುದ್ಧ ಜಯಗಳಿಸಲು ಸಾಧ್ಯವಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್, ವೆಂಕಟಸಿಂಗ್, ಬಸವರಾಜ ನಾಗಡದಿನ್ನಿ ಸೇರಿದಂತೆ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.

Leave a Comment