ಕ್ರಿಮಿನಲ್ ಧಾವೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ರಾಯಚೂರು.ಜ.23- ಅಶೋಕನಗರ ಬಡಾವಣೆ ನಿವೇಶನಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಹೂಡಲಾಗಿರುವ ದುರುದ್ದೇಶ ಪೂರ್ವಕ ಕ್ರಿಮಿನಲ್ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ವಹಿಸಿ ಮಾನವ ಹಕ್ಕು ಉಲ್ಲಂಘಿಸಿರುವ ಪೊಲೀಸರ ವಿರುದ್ದ ನಿರ್ದಾಕ್ಷಿಣ್ಯ ಕ್ರಮವಹಿಸುವಂತೆ ಭಾರತೀಯ ದಲಿತ ಪ್ಯಾಂಥರ್ ನಗರಾಧ್ಯಕ್ಷ ಕೆ. ಉದಯಕುಮಾರ ಒತ್ತಾಯಿಸಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಶೋಕನಗರ ಬಡಾವಣೆಯಲ್ಲಿರುವ ನಿವೇಶನವನ್ನು ಕೆಡವಿರುವ ಸುಳ್ಳು ಆರೋಪವನ್ನೊರಿಸಿ ಈರೇಶ ಹಾಗೂ ತಮ್ಮ ವಿರುದ್ಧ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ದಿ.10 ರಂದು ದುರುದ್ದೇಶಪೂರ್ವಕ ಕ್ರಿಮಿನಲ್ ಧಾವೆ ಹೂಡಲಾಗಿದೆ. ಈ ಕುರಿತು ಪ್ರಶ್ನಿಸಲು ಹೋದ ತಮ್ಮನ್ನು ಆವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ.
ಅಂಗವೈಕಲ್ಯತೆಯಿಂದ ಬಳಲುತ್ತಿರುವ ತಮ್ಮನ್ನು ಪ್ರತಿಷ್ಠಿತರ ಒತ್ತಡಕ್ಕೆ ಮಣಿದು ಠಾಣೆಯಲ್ಲಿಯೇ ರಾತ್ರಿಯಿಡಿ ಕೂಡಿಹಾಕಿ ಮಾನವ ಹಕ್ಕು ನಿಯಮಾವಳಿ ಸ್ಪಷ್ಟ ಉಲ್ಲಂಘಿಸಲಾಗಿದೆ. ತಮಗೆ ಜೀವಬೆದರಿಕೆಯೊಡ್ಡಿರುವವರ ವಿರುದ್ಧ ಹೂಡಲಾಗಿರುವ ಮೊಕದ್ದಮೆ ಹಿಂಪಡೆಯುವಂತೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮವಹಿಸುವಂತೆ ಈಗಾಗಲೇ ರಾಜ್ಯ ಮಾನವ ಹಕ್ಕು ಆಯೋಗ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಯಾವುದೇ ಕ್ರಮವಹಿಸಿಲ್ಲ.
ತಮ್ಮ ಕುಟುಂಬ ವರ್ಗಕ್ಕೆ ಜೀವ ಬೆದರಿಕೆಯೊಡ್ಡಿ ದುರುದ್ದೇಶ ಪೂರ್ವಕವಾಗಿ ಹೂಡಲಾಗಿರುವ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ವಹಿಸಿ, ತಡರಾತ್ರಿ ತಮ್ಮನ್ನು ಠಾಣೆಯಲ್ಲಿ ಕೂಡಿಹಾಕಿರುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಿ, ಕುಟುಂಬ ವರ್ಗಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿದರು. ಇತರೆ ಸಂಘಟನೆ ಸಂಚಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment