ಕ್ರಿಕೆಟ್‌ ಗುರು ಆರ್ಚೇಕರ್‌ಗೆ ಗೌರವ ಸಲ್ಲಿಸಿದ ಕ್ರಿಕೆಟ್‌ ದೇವರು

ನವದೆಹಲಿ, ಸೆ 5 – ಪ್ರತಿವರ್ಷದಂತೆ ಈ ವರ್ಷವೂ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರು ಶಿಕ್ಷಕರ ದಿನಾಚರಣೆಯ ಅಂಗವಾಗಿ ತಮ್ಮ ಬಾಲ್ಯದ ಕ್ರಿಕೆಟ್‌ ಗುರು ದಿವಂಗತ ರಮಾಕಾಂತ್‌ ಅರ್ಚೇಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಸಚಿನ್‌ ಬಾಲ್ಯದಲ್ಲಿದ್ದಾಗ ಆರ್ಚೇಕರ್‌ ಅವರು ಬ್ಯಾಟಿಂಗ್‌ ಕೋಚಿಂಗ್‌ ನೀಡುತ್ತಿರುವ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. “ಶಿಕ್ಷಕರು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತರಲ್ಲ, ಮೌಲ್ಯಗಳನ್ನು ತುಂಬುವಲ್ಲಿ ಅವರ ಪಾತ್ರ ಮಹತ್ವವಾದದ್ದು. ಮೈದಾನ ಹಾಗೂ ಜೀವನ ಎರಡರಲ್ಲೂ ನೇರವಾಗಿ ಆಡು ಎಂದು ಆರ್ಚೇಕರ್‌ ಸಾರ್‌ ನನಗೆ ಹೇಳಿದ್ದರು. ಇಂದಿಗೂ ಅವರು ನೀಡಿರುವ ಪಾಠ ಹಾಗೂ ಮೌಲ್ಯಗಳು ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಸಕ್ತ ವರ್ಷದ ಜನವರಿಯಲ್ಲಿ ಆರ್ಚೇಕರ್ ಅವರು ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆರ್ಚೇಕರ್‌ ಅವರು ನನ್ನ ಕ್ರಿಕೆಟ್‌ ವೃತ್ತಿ ಜೀವನಕ್ಕ ಭದ್ರಬುನಾದಿ ಹಾಕಿದ್ದರು ಎಂದು ಸಚಿನ್‌ ಹೇಳಿಕೊಂಡಿದ್ದರು.

16ನೇ ವಯಸ್ಸಿನಲ್ಲೇ ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ ವೃತ್ತಿ ಜೀವನ ಆರಂಭಿಸಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಸಚಿನ್‌ 34, 357 ರನ್‌ ಗಳಿಸಿದ್ದಾರೆ. 6, 000 ರನ್‌ಗಳ ಅಂತರದಿಂದ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ. 2012ರಲ್ಲೇ ಸಚಿನ್‌ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 2013ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೂ ನಿವೃತ್ತಿ ಹೇಳಿದ್ದರು.

Leave a Comment